
ಮಡಿಕೇರಿ ಸೆ.20 NEWS DESK : ಕೊಡವ ಹಾಕಿ ಅಕಾಡೆಮಿಯ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ನಡೆಯಬೇಕೆನ್ನುವ ಕೂಗು ಸರಿಯಲ್ಲ. ಯಾವುದೇ ಸಂಸ್ಥೆಯಲ್ಲಿ ಕಾರಣವಿಲ್ಲದೆ ಬದಲಾವಣೆಯ ಕೂಗು ಬರುವುದಿಲ್ಲ, ಚುನಾವಣೆ ನಡೆಯುವುದು ಸೂಕ್ತ ಎಂದು ಅಕಾಡೆಮಿಯ ವಿವಿಧ ಸ್ಥಾನಾಕಾಂಕ್ಷಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿರುವ ಮಚ್ಚಾರಂಡ ಪ್ರವೀಣ್ ತಿಮ್ಮಯ್ಯ ಅವರು ಕೊಡವ ಹಾಕಿ ಅಕಾಡೆಮಿಯನ್ನು ಸ್ಥಾಪಿಸಿದ ದಿ.ಪಾಂಡಂಡ ಕುಟ್ಟಪ್ಪ ಅವರು, ಮಹಾಸಭೆಯ ಒಪ್ಪಿಗೆ ಮೇರೆ ಬೈಲಾ ರಚಿಸಿ, ಅನುಮೋದನೆ ಪಡೆದು ಸಹಕಾರ ಕಾಯ್ದೆ ಅನ್ವಯ ನೋಂದಣಿ ಮಾಡಿರುತ್ತಾರೆ. ಈ ಬೈಲಾ ಅನುಸಾರ ಅಕಾಡೆಮಿಯ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಮೂರು ವರ್ಷಗಳಿಗೊಮ್ಮೆ ನಡೆಸಬೇಕಾಗುತ್ತದೆ. ಅದರಂತೆ ಇದೀಗ ಚುನಾವಣೆಯನ್ನು ಘೋಷಿಸಲಾಗಿದ್ದು, ಚುನಾವಣೆ ನಡೆಯಲೇಬೇಕೆಂದು ಹೇಳಿದರು. ಚುನಾವಣೆ ಘೋಷಣೆಯಾದ ನಂತರ ಮೇಕೇರಿರ ರವಿ ಪೆಮ್ಮಯ್ಯ ಹಾಗೂ ಪಾಂಡಂಡ ಕುಟ್ಟಪ್ಪ ಅವರ ಪುತ್ರ ಬೋಪಣ್ಣ ಅವರ ತಂಡ ಕಣಕ್ಕಿಳಿದಿದೆ. ಈ ಹಂತದಲ್ಲಿ ಜಿಲ್ಲೆಯ ಕೆಲವು ಕೊಡವ ಮುಖಂಡರು ಚುನಾವಣೆ ಇಲ್ಲದೆ ಒಂದು ತಂಡವನ್ನು ರಚಿಸಿ ಅವಿರೋಧ ಆಯ್ಕೆ ನಡೆಸುವಂತೆ ಸಲಹೆ ನೀಡಿದ್ದಾರೆ. ಅದರಂತೆ ಮೇಕೇರಿರ ರವಿ ಪೆಮ್ಮಯ್ಯ ಅವರು ಹಾಗೂ ತಂಡದ ಸದಸ್ಯರಾದ ನಾವು, ಅಖಿಲ ಕೊಡವ ಸಮಾಜದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಹೊಂದಾಣಿಕೆಗೆ ಒಪ್ಪಿಗೆಯನ್ನು ಸೂಚಿಸಿದ್ದೆವು. ಪಾಂಡಂಡ ಬೋಪಣ್ಣ ಕಡೆಯವರು ಹಾಲಿ ಇರುವ ಆಡಳಿತ ಮಂಡಳಿಯಲ್ಲಿ ಹೆಚ್ಚಿನ ಬದಲಾವಣೆ ಮಾಡದೆ, ನಮ್ಮ ತಂಡಕ್ಕೆ ಕೇವಲ ಎರಡು ಸ್ಥಾನಗಳನ್ನು ನೀಡುವ ನಿಲುವನ್ನು ತಳೆದಿದ್ದರು. ಇದನ್ನು ನಾವು ತಿರಸ್ಕರಿಸಿ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿರುವುದಾಗಿ ಸ್ಪಷ್ಟಪಡಿಸಿದರು. ಕೊಡವ ಹಾಕಿ ಅಕಾಡೆಮಿಯ 15 ಸ್ಥಾನಗಳಿಗೆ ಇದೇ ಸೆ.28 ರಂದು ವಿರಾಜಪೇಟೆಯ ತ್ರಿವೇಣಿ ಶಾಲೆಯಲ್ಲಿ ಚುನಾವಣೆ ನಡೆಯಲಿದೆ. ಇದರಲ್ಲಿ ಕೊಡವ ಹಾಕಿ ಹಬ್ಬದಲ್ಲಿ ಪಾಲ್ಗೊಂಡ ಹಾಕಿ ತಂಡಗಳ ಕುಟುಂಬದ ಪ್ರತಿನಿಧಿಗಳಾಗಿ 415 ಮಂದಿ ಮತದಾರರಾಗಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿ, ನಮ್ಮ ತಂಡ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಜಿಲ್ಲೆಯಲ್ಲಿ ಹಾಕಿ ಕ್ರೀಡೆಯ ಮತ್ತಷ್ಟು ಬೆಳವಣಿಗೆಯ ಚಿಂತನೆಯಿಂದ ಎಂದರು. ಸುದ್ದಿಗೋಷ್ಠಿಯಲ್ಲಿ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮೇಕೇರಿರ ರವಿ ಪೆಮ್ಮಯ್ಯ, ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿರುವ ಬುಟ್ಟಿಯಂಡ ಚಂಗಪ್ಪ, ಮಡಿಕೇರಿ ತಾಲ್ಲೂಕು ಉಪಾಧ್ಯಕ್ಷ ಸ್ಥಾನದ ಸ್ಪರ್ಧಿ ಮಾದಂಡ ಪೆಮ್ಮಯ್ಯ ಹಾಗೂ ಸೋಮವಾರಪೇಟೆ ತಾಲ್ಲೂಕು ಉಪಾಧ್ಯಕ್ಷ ಸ್ಥಾನದ ಸ್ಪರ್ಧಿ ಕಲ್ಮಾಡಂಡ ತರುಣ್ ತಮ್ಮಯ್ಯ ಉಪಸ್ಥಿತರಿದ್ದರು.









