
ಮಡಿಕೇರಿ NEWS DESK ಸೆ.21 : ರಾಜ್ಯ ಸರಕಾರ ನಡೆಸುತ್ತಿರುವ ಜಾತಿ ಜನಗಣತಿ ಸಂದರ್ಭ ಕೊಡಗು ಜಿಲ್ಲೆಯ ಮರಾಠ ಮರಾಟಿ ಸಮಾಜ ಬಾಂಧವರು ಜಾತಿಯನ್ನು ಮರಾಠ ಎಂದು ನಮೂದಿಸುವಂತೆ ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ವರ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರಕಾರದ ಗೆಜೆಟೆಡ್ ನೋಟಿಫಿಕೇಶನ್ ನಲ್ಲಿ ‘ಮರಾಠ’ ಎಂದು ಇರುವುದರಿಂದ ಯಾವುದೇ ವ್ಯತ್ಯಾಸಗಳನ್ನು ಮಾಡದೆ ಮತ್ತು ತಪ್ಪು ಮಾಹಿತಿ ನೀಡದೆ ಸಹಕರಿಸಬೇಕೆಂದು ತಿಳಿಸಿದ್ದಾರೆ. ಮುಂದೆ ಕೊಡಗಿನಲ್ಲಿ ‘ಮರಾಠ’ ಎಂದು ಒಂದೇ ಜಾತಿಯ ದೃಢೀಕರಣವನ್ನು ಪಡೆಯಲು ಸಂಘದ ಮೂಲಕ ಶ್ರಮಿಸಲಾಗುವುದು. ಈಗಾಗಲೇ ಮಾರಾಠಿ, ಮಾರಾಟ, ಮಾರಾಟಿ ಮರಾಠ ಈ ರೀತಿಯ ವ್ಯತ್ಯಾಸಗಳಿದ್ದು, ಯಾವುದೇ ಗೊಂದಲವಿಲ್ಲದೆ ಜಿಲ್ಲಾ ಸಂಘದ ಸೂಚನೆಯಂತೆ ‘ಮರಾಠ’ ಎಂದು ನಮೂದಿಸಬೇಕು. ಭಾಷೆಯನ್ನು ಮರಾಠ ಅಥವಾ ಕನ್ನಡ ಅಥವಾ ತುಳು ಎಂದು ನಮೂದಿಸಬೇಕು. ಅಂತರ್ಜಾತಿ ವಿವಾಹ ಆದವರು ಕೂಡ ತಮ್ಮ ಮೂಲ ಜಾತಿ ‘ಮರಾಠ’ ಎಂದೇ ನಮೂದಿಸಬೇಕು. ಈ ಮಾಹಿತಿಯನ್ನು ಸಂಘದ ಉಪ ಸಮಿತಿ, ಜಿಲ್ಲಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಸಂಬಂಧಿಕರು ಅವರವರ ಗ್ರಾಮದಲ್ಲಿರುವ ಜನಾಂಗಬಾಂಧವರಿಗೆ ತಿಳಿಸಬೇಕೆಂದು ಎಂ.ಎಂ.ಪರಮೇಶ್ವರ ಮನವಿ ಮಾಡಿದ್ದಾರೆ. ದಕ್ಷಿಣ ಕನ್ನಡದಿಂದ ಬಂದಿರುವ ಮರಾಟಿಗರು ಕೂಡ ಕೊಡಗಿನಲ್ಲಿ ಖಾಯಂನಿವಾಸಿಗಳಾಗಿದ್ದರೆ ಜಾತಿ ಕಾಲಂನಲ್ಲಿ ‘ಮರಾಠ’ ಎಂದು ನಮೂದಿಸಿ ಸಹಕರಿಸುವಂತೆ ಕೋರಿದ್ದಾರೆ.








