
ಮಡಿಕೇರಿ NEWS DESK ಸೆ.22 : ರಾಜ್ಯ ಸರಕಾರದ ಮೂಲಕ ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಜಾತಿ ಜನಗಣತಿಯಲ್ಲಿ ಅರೆಭಾಷೆ ಗೌಡರು ಜಾತಿಯನ್ನು GOWDA (ಗೌಡ) ಎಂದು ನಮೂದಿಸುವಂತೆ ಕೊಡಗು ಗೌಡ ವಿದ್ಯಾ ಸಂಘ ಮನವಿ ಮಾಡಿದೆ. ಪತ್ರಿಕಾ ಪ್ರಕಟಣೆ ನೀಡಿರುವ ವಿದ್ಯಾ ಸಂಘದ ಅಧ್ಯಕ್ಷ ನವೀನ್ ಅಂಬೆಕಲ್ ಅವರು ರಾಜ್ಯ ಸರಕಾರ ಮತ್ತು ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ನಡೆಸುವ ಗಣತಿಯ ಸಂದರ್ಭ ಅರೆಭಾಷೆ ಗೌಡರು ಜಾತಿಯ ಕಾಲಂನಲ್ಲಿ GOWDA (ಗೌಡ) ಎಂದು, ಉಪಜಾತಿ ‘ಅರೆಭಾಷೆ ಗೌಡ’ ಹಾಗೂ ಮಾತೃಭಾಷೆ ಕಾಲಂನಲ್ಲಿ ‘ಅರೆಭಾಷೆ’ ಎಂದು ನಮೂದಿಸುವಂತೆ ಕೋರಿದ್ದಾರೆ. ಮೂಲತಃ ಅರೆಭಾಷೆ ಗೌಡರು ಒಕ್ಕಲಿಗ ಸಮುದಾಯದ ಭಾಗವಾಗಿದ್ದಾರೆ, ಆದರೆ ಅರೆಭಾಷೆ ಗೌಡರ ಶೈಕ್ಷಣಿಕ, ಕಂದಾಯ ಸೇರಿದಂತೆ ಎಲ್ಲಾ ಮೂಲ ದಾಖಲೆಗಳಲ್ಲಿ GOWDA (ಗೌಡ) ಎಂದೇ ನಮೂದಿಸಲಾಗಿದೆ. ಈಗ ಬದಲಾಯಿಸಿ ಮಾಹಿತಿ ನೀಡಿದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅರೆಭಾಷೆ ಗೌಡ ಸಮುದಾಯದ ಸಭೆಗಳನ್ನು ನಡೆಸಿ ಕೊಡಗಿನ ಎಲ್ಲಾ ಗೌಡ ಸಮಾಜಗಳೊಂದಿಗೆ ಸಮಾಲೋಚಿಸಿ GOWDA (ಗೌಡ) ಎಂದು ನಮೂದಿಸಲು ಕೊಡಗು ಗೌಡ ಸಮಾಜಗಳ ಒಕ್ಕೂಟ ನಿರ್ಣಯ ಕೈಗೊಂಡಿದೆ. ಇದಕ್ಕೆ ಕೊಡಗು ಗೌಡ ವಿದ್ಯಾ ಸಂಘದ ಸಮ್ಮತಿ ಇದೆ. ಗಣತಿಯಲ್ಲಿ ತಮ್ಮ ಜಾತಿಗೆ ಇರುವ ಇನ್ನೊಂದು ಹೆಸರು ಎಂಬ ಕಾಲಂ ಕೂಡ ಇದ್ದು, ಇದರಲ್ಲಿ ಒಕ್ಕಲಿಗ, ಕೊಡಗು ಗೌಡ, ಅರೆಭಾಷೆ ಒಕ್ಕಲಿಗ ಎಂದು ನಮೂದಿಸಲು ಸಲಹೆ ನೀಡಿದ್ದಾರೆ. ಎಲ್ಲಾ ಮೂಲ ದಾಖಲೆಗಳನ್ನು ಒಕ್ಕಲಿಗ ಎಂದು ಹೊಂದಿರುವ ಅರೆಭಾಷೆ ಗೌಡ ಸಮುದಾಯದವರು ಇದ್ದರೆ, ಜಾತಿ ಒಕ್ಕಲಿಗ, ಉಪಜಾತಿ ಅರೆಭಾಷೆ ಗೌಡ, ಅರೆಭಾಷೆ ಒಕ್ಕಲಿಗ ಮತ್ತು ಮಾತೃಭಾಷೆ ಅರೆಭಾಷೆ ಎಂದು ನಮೂದಿಸಲು ಯಾವುದೇ ಅಭ್ಯಂತರವಿರುವುದಿಲ್ಲ ಎಂದು ನವೀನ್ ಅಂಬೆಕಲ್ ಸ್ಪಷ್ಟಪಡಿಸಿದ್ದಾರೆ. ಉಪಜಾತಿಯಲ್ಲಿ ಅರೆಭಾಷೆ ಗೌಡ ಎಂಬುವುದನ್ನು ಪ್ರತ್ಯೇಕ ಕಾಲಂನಲ್ಲಿ ಸೇರಿಸಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಸಲ್ಲಿಸಿದ ಮನವಿಗೆ ಸರಕಾರ ಸ್ಪಂದಿಸಿದೆ. ಸಮುದಾಯ ಬಾಂಧವರು ಎಲ್ಲಾ ವಿವರಗಳನ್ನು ಗಮನದಲ್ಲಿರಿಸಿಕೊಂಡು ಉಪಜಾತಿ ಎನ್ನುವ ಕಾಲಂನಲ್ಲಿ ‘ಅರೆಭಾಷೆ ಗೌಡ’ ಎಂದು ನಮೂದಿಸುವುದರೊಂದಿಗೆ ಕಡ್ಡಾಯವಾಗಿ ಎರಡೂ ಗಣತಿಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.









