
ನಾಪೋಕ್ಲು ಸೆ.23 NEWS DESK : ಬಲಮುರಿ ಶ್ರೀ ಮಹಾದೇವ ಸ್ಪೋರ್ಟ್ಸ್ ಕ್ಲಬ್‍ನ 73ನೇ ವಾರ್ಷಿಕ ಮಹಾಸಭೆಯು ಕ್ಲಬ್ ನ ಕಚೇರಿಯಲ್ಲಿ ನಡೆಯಿತು. ಕ್ಲಬ್ ನ ಅಧ್ಯಕ್ಷರಾದ ತೊತ್ತಿಯಂಡ ಬನ್ಸಿ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಲಬ್ ನ ವತಿಯಿಂದ ಆಯೋಜಿಸಲ್ಪಟ್ಟ ಹಾಗೂ ಇತರಡೆ ನಡೆಸಿದ ಕಾರ್ಯಕ್ರಮಗಳು, ಕ್ರೀಡಾಕೂಟಗಳ ಬಗ್ಗೆ ಹಾಗೂ ಸಾಧಕ ಬಾಧಕಗಳ ಬಗ್ಗೆ ಚರ್ಚೆಗಳು ನಡೆದು ಅನುಮೋದನೆಗೊಂಡವು. ಮಹಾದೇವ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇತರ ಕ್ರೀಡಾಕೂಟಗಳಲ್ಲಿ ಜಯಶೀಲರಾದ ತಂಡಗಳನ್ನು ಹಾಗೂ ವೈಯಕ್ತಿಕ ವಿಜೇತರನ್ನು ಅಭಿನಂದಿಸಲಾಯಿತು. ಬರುವ ನವೆಂಬರ್ ತಿಂಗಳಿನಲ್ಲಿ ಕ್ಲಬ್ ವತಿಯಿಂದ ಜಿಲ್ಲಾಮಟ್ಟದಲ್ಲಿ ಮಹಿಳೆಯರಿಗೆ ಥ್ರೋಬಾಲ್, ಪುರುಷರಿಗೆ ವಾಲಿಬಾಲ್ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸುಲು ತೀರ್ಮಾನಿಸಲಾಯಿತು. ನಿವೃತ್ತ ದೈಹಿಕ ಶಿಕ್ಷಕರಾದ ಚೈಯ್ಯಂಡ ರಘು ತಿಮ್ಮಯ್ಯ ಹಾಗೂ ಹಿರಿಯರಾದ ಬೊಳ್ಳಚೆಟ್ಟಿರ ಚೆಟ್ಟಿಚ್ಚ ಅವರು ಇದರ ಬಗ್ಗೆ ಸೂಕ್ತ ಮಾಹಿತಿ ಸಲಹೆ ಸೂಚನೆಯನ್ನು ನೀಡಿ ಮತ್ತೊಂದು ಸಭೆ ನಡೆಸಿ ಕ್ರೀಡಾಕೂಟ ನಡೆಸುವ ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದರು. ಈ ಸಂದರ್ಭ ಕ್ಲಬ್ ನಿಕಟ ಪೂರ್ವ ಅಧ್ಯಕ್ಷರಾದ ಬಿದ್ದಂಡ ಸಂದೀಪ್ ನಂಜಪ್ಪ, ಹಿರಿಯ ಕ್ರೀಡಾಪಟು ಬಾಕಿಲನ ವನಿತಾ ವಿಜಯ್, ಕಾರ್ಯದರ್ಶಿ ಬೊಳ್ಳಚಟ್ಟಿರ ಜಯಂತಿ, ಬೊಳ್ಳಚಟ್ಟಿರ ಮೈನಾ ಕಾಳಪ್ಪ, ಚೆಯ್ಯಂಡ ಕಸ್ತೂರಿ ತಿಮ್ಮಯ್ಯ, ತೊತ್ತಿಯಂಡ ಸುಪ್ರೀತಾ, ಆಂಗೀರ ಸಂತೋಷ್, ಮೇಡತನ ಶಾಂತಿ ಸೇರಿದಂತೆ ಕ್ಲಬ್ಬಿನ ಪದಾಧಿಕಾರಿಗಳು ಕ್ರೀಡಾ ಅಭಿಮಾನಿಗಳು ಭಾಗವಹಿಸಿದ್ದರು. ಮೇಡತನ ರಶ್ಮಿ ಶಿವರಾಂ ಪ್ರಾರ್ಥಿಸಿ, ಉಪಾಧ್ಯಕ್ಷರಾದ ಗುಡ್ಡೇರ ಲಕ್ಷು ಸೋಮಣ್ಣ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಬೊಳ್ಳಚಟ್ಟಿರ ಅಚ್ಚಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ : ದುಗ್ಗಳ ಸದಾನಂದ.









