
ಮಡಿಕೇರಿ NEWS DESK ಸೆ.24 : ಪ್ರಸ್ತುತ ರಾಜ್ಯ ಸರಕಾರ ನಡೆಸುತ್ತಿರುವ ಮತ್ತು ಮುಂದಿನ ವರ್ಷ ಕೇಂದ್ರ ಸರಕಾರ ನಡೆಸುವ ಜಾತಿ ಜನಗಣತಿ ಸಂದರ್ಭ ಕೊಡಗಿನ ಅರೆಭಾಷೆ ಗೌಡರು ಜಾತಿಯ ಕಾಲಂನಲ್ಲಿ GOWDA (ಗೌಡ) ಎಂದು ನಮೂದಿಸುವಂತೆ ಆಲೂರು ಸಿದ್ದಾಪುರ ಗೌಡ ಸಮಾಜ ಮನವಿ ಮಾಡಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಆಲೂರು ಸಿದ್ದಾಪುರ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಅವರು ರಾಜ್ಯ ಸರಕಾರದ ವತಿಯಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಜನಗಣತಿಯ ಸಮೀಕ್ಷೆ ಆರಂಭಗೊಂಡಿದೆ. ಗಣತಿದಾರರು ಬಂದಾಗ ಅರೆಭಾಷೆ ಗೌಡರು ಜಾತಿಯ ಕಾಲಂನಲ್ಲಿ GOWDA (ಗೌಡ) ಎಂದು, ಉಪಜಾತಿ ಅರೆಭಾಷೆ ಗೌಡ ಮತ್ತು ಮಾತೃಭಾಷೆಯ ಕಾಲಂನಲ್ಲಿ ಅರೆಭಾಷೆ ಗೌಡ ಎಂದು ನಮೂದಿಸುವಂತೆ ಕೋರಿದ್ದಾರೆ. ಮೂಲತಃ ಅರೆಭಾಷೆ ಗೌಡರು ಒಕ್ಕಲಿಗ ಸಮುದಾಯದ ಭಾಗವಾಗಿದ್ದಾರೆ, ಆದರೆ ಅರೆಭಾಷೆ ಗೌಡರ ಶೈಕ್ಷಣಿಕ, ಕಂದಾಯ ಸೇರಿದಂತೆ ಎಲ್ಲಾ ಮೂಲ ದಾಖಲೆಗಳಲ್ಲಿ ‘ಗೌಡ’ ಎಂದೇ ನಮೂದಿಸಲಾಗಿದೆ. ಈಗ ಬದಲಾಯಿಸಿ ಮಾಹಿತಿ ನೀಡಿದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅರೆಭಾಷೆ ಗೌಡ ಸಮುದಾಯದ ಸಭೆಗಳನ್ನು ನಡೆಸಿ ಕೊಡಗಿನ ಎಲ್ಲಾ ಗೌಡ ಸಮಾಜಗಳೊಂದಿಗೆ ಸಮಾಲೋಚಿಸಿ GOWDA (ಗೌಡ) ಎಂದು ನಮೂದಿಸಲು ಕೊಡಗು ಗೌಡ ಸಮಾಜಗಳ ಒಕ್ಕೂಟ ನಿರ್ಣಯ ಕೈಗೊಂಡಿದೆ. ಇದಕ್ಕೆ ಆಲೂರು ಸಿದ್ದಾಪುರ ಗೌಡ ಸಮಾಜದ ಸಮ್ಮತಿ ಇದೆ. ಗಣತಿಯಲ್ಲಿ ತಮ್ಮ ಜಾತಿಗೆ ಇರುವ ಇನ್ನೊಂದು ಹೆಸರು ಎಂಬ ಕಾಲಂ ಕೂಡ ಇದ್ದು, ಇದರಲ್ಲಿ ಒಕ್ಕಲಿಗ, ಕೊಡಗು ಗೌಡ, ಅರೆಭಾಷೆ ಒಕ್ಕಲಿಗ ಎಂದು ನಮೂದಿಸಲು ಸಲಹೆ ನೀಡಿದ್ದಾರೆ. ಎಲ್ಲಾ ಮೂಲ ದಾಖಲೆಗಳನ್ನು ಒಕ್ಕಲಿಗ ಎಂದು ಹೊಂದಿರುವ ಅರೆಭಾಷೆ ಗೌಡ ಸಮುದಾಯದವರು ಇದ್ದರೆ, ಜಾತಿ ಒಕ್ಕಲಿಗ, ಉಪಜಾತಿ ಅರೆಭಾಷೆ ಗೌಡ, ಅರೆಭಾಷೆ ಒಕ್ಕಲಿಗ ಮತ್ತು ಮಾತೃಭಾಷೆ ಅರೆಭಾಷೆ ಎಂದು ನಮೂದಿಸಲು ಯಾವುದೇ ಅಭ್ಯಂತರವಿರುವುದಿಲ್ಲ ಎಂದು ದೇವಾಯಿರ ಗಿರೀಶ್ ಸ್ಪಷ್ಟಪಡಿಸಿದ್ದಾರೆ. ಉಪಜಾತಿಯಲ್ಲಿ ಅರೆಭಾಷೆ ಗೌಡ ಎಂಬುವುದನ್ನು ಪ್ರತ್ಯೇಕ ಕಾಲಂನಲ್ಲಿ ಸೇರಿಸಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಸಲ್ಲಿಸಿದ ಮನವಿಗೆ ಸರಕಾರ ಸ್ಪಂದಿಸಿದೆ. ಉಪಜಾತಿ ಎನ್ನುವ ಕಾಲಂನಲ್ಲಿ ‘ಅರೆಭಾಷೆ ಗೌಡ’ ಎಂದು ನಮೂದಿಸುವುದರೊಂದಿಗೆ ಕಡ್ಡಾಯವಾಗಿ ರಾಜ್ಯ ಹಾಗೂ ಕೇಂದ್ರದ ಎರಡೂ ಗಣತಿಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.








