
ಮಡಿಕೇರಿ ಸೆ.24 NEWS DESK : ಕೊಡಗಿನ ಕಾಳಿದಾಸ ಎಂದೇ ಪ್ರಖ್ಯಾತರಾಗಿರುವ ಕೊಡವ ಭಾಷಾ ಸಾಹಿತಿ ‘ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ’ಗಳ 158ನೇ ಜನ್ಮದಿನಾಚರಣೆ ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಅಲ್ಲಾರಂಡ ರಂಗಚಾವಡಿ ಮತ್ತು ಮಡಿಕೇರಿ ಕೊಡವ ಸಮಾಜದ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಅಪ್ಪಚ್ಚಕವಿ ಕಲಾಭವನ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಅಪ್ಪನೆರವಂಡ ಮನೋಜ್ ಮಂದಪ್ಪ ಅಪ್ಪಚ್ಚ ಕವಿಯ ಭಾವ ಚಿತ್ರಕ್ಕೆ ಜ್ಯೋತಿಯನ್ನು ಬೆಳಗಿ, ‘ಮೀದಿ’ಯನ್ನಿರಿಸಿ ಉದ್ಘಾಟಿಸಿದರು. ಕೊಡವ ‘ನಾಟಕ ಪ್ರದರ್ಶನ ಕೇಂದ್ರ’ದ ಸ್ಥಾಪನೆಯಾಗಲಿ :: ಕಾರ್ಯಕ್ರಮ ಉದ್ಘಾಟಿಸಿದ ಅಪ್ಪನೆರವಂಡ ಮನೋಜ್ ಮಂದಪ್ಪ ಮಾತನಾಡಿ, ಕೊಡವ ಭಾಷಾ ಸಂಸ್ಕೃತಿ, ನಾಟಕಗಳ ಪ್ರದರ್ಶನ ಸಾಹಿತ್ಯಿಕವಾದ ಕಾರ್ಯಕ್ರಮಗಳಿಗಾಗಿ ಕೊಡವ ನಾಟಕ ಪ್ರದರ್ಶನ ಕೇಂದ್ರ (ಡ್ರಾಮಾ ಸೆಂಟರ್) ಸ್ಥಾಪನೆ ಅತ್ಯವಶ್ಯಕವಾಗಿ ಆಗಬೇಕಿದೆಯೆಂದು ಅಭಿಪ್ರಾಯಿಸಿದರು. ಶತಮಾನಗಳ ಹಿಂದೆ ಅತ್ಯಂತ ಸಂಕಷ್ಟದ ಬದುಕಿನ ನಡುವೆಯೂ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಕೊಡವ ಭಾಷೆಯಲ್ಲಿ ಸಾಕಷ್ಟು ಹಾಡುಗಳನ್ನು, ನಾಟಕಗಳನ್ನು ರಚಿಸುವ ಮೂಲಕ ಕೊಡವ ಭಾಷಾ ಆದಿ ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಬೆಳವಣಿಗೆಗೆ ಪೂರಕವಾಗಿ ಕೊಡವ ನಾಟಕ ಪ್ರದರ್ಶನ ಕೇಂದ್ರದ ಅಗತ್ಯತೆ ಇರುವುದಾಗಿ ಅವರು ತಿಳಿಸಿದರು. ಮಡಿಕೇರಿ ತಾಲ್ಲೂಕಿನ ಪಾರಾಣೆ ಬಳಿಯ ಕಿರುಂದಾಡು ಗ್ರಾಮದಲ್ಲಿ 1868ರಲ್ಲಿ ಜನಿಸಿದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರ ಕಾಲ ಘಟ್ಟದಲ್ಲಿ ಜಿಲ್ಲೆಯಲ್ಲಿ ಆರ್ಥಿಕ ಬೆಳೆೆ ಕಾಫಿಯಾಗಲಿ, ಸುಗಮ ಸಂಚಾರಕ್ಕೆ ಪೂರಕ ವ್ಯವಸ್ಥೆಗಳಾಗಲಿ ಇರಲಿಲ್ಲ. ಅಂತಹ ಸಂಕಷ್ಟದ ಸಂದರ್ಭದಲ್ಲು ಸಾಹಿತ್ಯದತ್ತ ಒಲವು ತೋರಿ, ನಾಟಕ ಮತ್ತು ಹಾಡುಗಳನ್ನು ರಚಿಸಿದರೆಂದು ಕವಿಯನ್ನು ಅವರು ಸ್ಮರಿಸಿದರು. :: ಸಾಕ್ಷ್ಯ ಚಿತ್ರ ಪ್ರದರ್ಶನ :: ಕಾರ್ಯಕ್ರಮದಲ್ಲಿ ಅಲ್ಲಾರಂಡ ವಿಠಲ ನಂಜಪ್ಪ ಅವರ ನಿರ್ಮಾಣ, ನಿರ್ದೇಶನದಲ್ಲಿ ಹೊರತರಲಾಗಿರುವ ‘ಹರದಾಸ ಅಪ್ಪಚ್ಚ ಕವಿ’ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಇದರಲ್ಲಿ ಕವಿಯ ಬದುಕಿನ ಪಥವನ್ನು ಸರಳ ಸುಂದರವಾಗಿ ಪ್ರಸ್ತುತ ಪಡಿಸಲಾಗಿದೆ. :: ದೊರಕದ ಪ್ರೋತ್ಸಾಹ ಬೆಂಬಲ :: ಸಾಕ್ಷ್ಯ ಚಿತ್ರವನ್ನು ಉದ್ಘಾಟಿಸಿದ ಬರಹಗಾರ್ತಿ ಹಾಗೂ ಕೊಡವ ಭಾಷಾ ಚಲನ ಚಿತ್ರ ನಿಮಾಪಕಿ ಈರಮಂಡ ಹರಿಣಿ ವಿಜಯ್, ಅಪ್ಪನೆರವಂಡ ಅಪ್ಪಚ್ಚ ಕವಿಯ ಬದುಕಿನ ಘಟ್ಟಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಸಾಕ್ಷ್ಯ ಚಿತ್ರದ ಮೂಲಕ ಪ್ರತಿಬಿಂಬಿಸಲಾಗಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿ, ಕೊಡಗಿನ ಕೊಡವ ಭಾಷೆಯಲ್ಲಿ ರಚಿಸಿರುವ ಸಾಹಿತ್ಯಕ್ಕಾಗಲಿ,ಸಿನಿಮಾಗಳಿಗೆ ಇಂದಿಗೂ ಸೂಕ್ತ ಪ್ರೋತ್ಸಾಹ ಬೆಂಬಲಗಳು ದೊರಕುತ್ತಿಲ್ಲವೆಂದು ಅತೀವ ಬೇಸರವನ್ನು ಇದೇ ಸಂದರ್ಭ ವ್ಯಕ್ತಪಡಿಸಿದರು.
ಕೊಡವ ಭಾಷಾ ಸಾಹಿತಿಗೆ ಆತ್ಮೀಯ ಸನ್ಮಾನ- ಕೊಡವ ಭಾಷಾ ಸಾಹಿತಿ ನಾಗೇಶ್ ಕಾಲೂರು ಅವರನ್ನು ಅಲ್ಲಾರಂಡ ರಂಗ ಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಸೇರಿದಂತೆ ಅಪ್ಪನೆರವಂಡ ಕುಟುಂಬಸ್ಥರು ಹಾಗೂ ಗಣ್ಯರು ಸನ್ಮಾನಿಸಿ ಗೌರವಿಸಿದರು. ಸಾಂಪ್ರದಾಯಿಕ ಉಡುಪುತೊಟ್ಟ ಸಾಹಿತಿ ನಾಗೇಶ್ ಕಾಲೂರು ಅವರನ್ನು ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ವೇದಿಕೆಗೆ ಕರೆತಂದುದು ಗಮನ ಸೆಳೆಯಿತು. :: ರಾಜಕೀಯ ಕಾರಣಗಳಿಂದ ದ್ವೇಷ ಭಾವನೆ :: ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಗೇಶ್ ಕಾಲೂರು, ಕೊಡಗಿನ ಕುಲದೇವತೆ ಕಾವೇರಿ, ಲೋಕಕಲ್ಯಾಣಕ್ಕಾಗಿ ಅಗಸ್ತ್ಯರ ಕುಂಡಿಕೆಯಿಂದ ಹೊರ ಚಿಮ್ಮಿ ನದಿಯಾಗಿ ಹರಿದ ಕಾಲ ಘಟ್ಟದಿಂದಲು ಕೊಡಗಿನ ಕೊಡವರು ಮತ್ತು ಬ್ರಾಹ್ಮಣ ಸಮುದಾಯದ ನಡುವೆ ಅವಿನಾಭಾವ ಸಂಬಂಧಗಳಿವೆ. ಇಂದಿನ ಕಾಲ ಘಟ್ಟದಲ್ಲಿ ಜಾತಿ-ಜಾತಿಗಳ ನಡುವೆ ಮೂಡುತ್ತಿರುವ ದ್ವೇಷ ಭಾವನೆ ಕೇವಲ ರಾಜಕೀಯ ಕಾರಣಗಳಿಂದ ಮೂಡಿದೆಯೆಂದು ಅನಿಸಿಕೆ ವ್ಯಕ್ತಪಡಿಸಿದರು. ನಮ್ಮ ಆಚಾರ ವಿಚಾರ, ಸಂಪ್ರದಾಯಗಳು ನಮ್ಮಲ್ಲಿರಲಿ. ಇದೇ ಹಂತದಲ್ಲಿ ಮತ್ತೊಬ್ಬರ ಆಚಾರ ವಿಚಾರಗಳನ್ನು ಗೌರವಿಸುವ ಮನಸ್ಥಿತಿಯನ್ನು ಪ್ರತಿಯೊಬ್ಬರಲ್ಲು ಕಾಣುವ ಅಗತ್ಯವಿದೆ. ಇತರೆ ಜಾತಿಗಳ ದೂಷಣೆ, ಅಪಹಾಸ್ಯ ಎಂದಿಗೂ ಸಲ್ಲ ಮತ್ತು ನಮ್ಮ ನಂಬುಗೆ ವಿಚಾರಗನ್ನು ಇತರರ ಮೇಲೆ ಹೇರುವುದು ಒಳ್ಳೆಯದಲ್ಲ. ಇದಕ್ಕೆ ಒದಲಾಗಿ ಪರಸ್ಪರರನ್ನು ಗೌರವಿಸಿದಾಗ ಮಾತ್ರ ನಮ್ಮ ಗೌರವ ಹೆಚ್ಚುತ್ತದೆಂದು ದೃಢವಾಗಿ ನುಡಿದರು. :: ಪುಸ್ತಕಗಳ ವಿಮರ್ಶೆ :: ಕಾರ್ಯಕ್ರಮದ ಭಾಗವಾಗಿ ಉಳ್ಳಿಯಡ ಡಾಟಿ ಪೂವಯ್ಯ ಅವರು ಬರೆದ ‘ತೇನೆತ್ತಕಾರ’, ಡಾ.ಮುಲ್ಲೇಂಗಡ ರೇವತಿ ಪೂವಯ್ಯ ಅವರು ರಚಿಸಿರುವ ‘ನೆಲಂಜಪ್ಪೆ’, ದಿ.ಪಳಂಗಂಡ ಚಂಗಪ್ಪ ಅವರ ಅನುವಾದ ಕೃತಿ ‘ಕೊಡಗ್‌ರ ಗೌರಮ್ಮಂಡ ಕಥೆ ಮೊತ್ತೆ’ ಪುಸ್ತಕಗಳ ಕುರಿತು ಕಲಿಯಂಡ ಸರಸ್ವತಿ ಚಂಗಪ್ಪ, ಮಾಳೇಟಿರ ಸೀತಮ್ಮ, ಐಚಂಡ ರಸ್ಮಿ ಮೇದಪ್ಪ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅಲ್ಲಾರಂಡ ರಂಗ ಚಾವಡಿ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 23 ವರ್ಷಗಳಿಂದ ರಂಗ ಚಾವಡಿ ಕೊಡವ ಭಾಷಾ ಸಾಹಿತ್ಯದ ಬೆಳವಣಿಗೆಯ ಚಿಂತನೆಯೊಂದಿಗೆ, ಪ್ರಗತಿಪರವಾದ ಕಾರ್ಯಕ್ರಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಅಪ್ಪಚ್ಚ ಕವಿ ಅವರ ಸಾಹಿತ್ಯಿಕ ಬೆಳವಣಿಗೆಗೆ ವೆಂಕಟಾದ್ರಿ ಶಾಮರಾವ್, ಕಿರುಂದಾಡು ಸಾವಿತ್ರಿ ಮೊದಲಾದವರು ಸಹಕರಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಡವ ಭಾಷಾ ಸಾಹಿತ್ಯಕ್ಕೆ ಕೊಡುಗೆ ನೀಡುತ್ತಿರುವ ನಾಗೇಶ್ ಕಾಲೂರು ಅವರನ್ನು ಸನ್ಮಾನಿಸಿರುವುದಾಗಿ ತಿಳಿಸಿದರು. ಮಡಿಕೇರಿ ಕೊಡವ ಸಮಾಜದ ನಿರ್ದೇಶಕಿ ಬೊಪ್ಪಂಡ ಸರಳ ಕರುಂಬಯ್ಯ ಅವರು ಅಪ್ಪನೆರವಂಡ ಅಪ್ಪಚ್ಚ ಕವಿಗಳು ರಚಿಸಿದ ‘ಶಂಭುವೇ ನಿನ್ನ ನಂಬಿಯೆ ನಾ’ ಹಾಡನ್ನು ಸುಮಧುರವಾಗಿ ಹಾಡಿದರು. ಲೇಖಕಿ ಬೊಟ್ಟೋಳಂಡ ನಿವ್ಯ ದೇವಯ್ಯ ಕಾರ್ಯಕ್ರಮ ನಿರೂಪಿಸಿದರು.









