
ಮಡಿಕೇರಿ ಸೆ.24 NEWS DESK : ಕೊಡಗು ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್(ನೀಮಾ) ಹಾಗೂ ಆಯುಷ್ ಇಲಾಖೆ ವತಿಯಿಂದ ಹತ್ತನೆಯ ವರ್ಷದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಮೇಕೇರಿಯಲ್ಲಿ ಆಚರಿಸಲಾಯಿತು. ಕೇಂದ್ರ ಸರ್ಕಾರ ಈ ವರ್ಷ ಆರೋಗ್ಯಕ್ಕಾಗಿ ಆಯುರ್ವೇದ ಎಲ್ಲರಿಗೂ ಆಯುರ್ವೇದ ಎಂಬ ಧ್ಯೇಯದೊಂದಿಗೆ ಪ್ರತಿ ಮನೆಯಲ್ಲಿಯೂ ಮದ್ದಿನ ಗಿಡದ ಪ್ರಾಮುಖ್ಯತೆ ತಿಳಿಸುವ ಯೋಜನೆಗೆ ಪೂರಕವಾಗಿ “ನೀಮಾ-ಕೊಡಗು” ವತಿಯಿಂದ ಕೊಡಗಿನ ಅಳಿವಿನಂಚಿನಲ್ಲಿರುವ ಹಾಗೂ ವಿಶೇಷ ಔಷಧೀಯ ಗುಣಗಳನ್ನು ಹೊಂದಿರುವ “ಮೂಲಿಕಾ ವನ” ವನ್ನು ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಗಜರಾಜ ನಾಯ್ಡು ಅವರು ಸಂಘಕ್ಕೆ ಒಂದು ಎಕರೆಗೂ ಮೀರಿದ ಜಾಗವನ್ನು ಉದಾರವಾಗಿ ಹಸ್ತಂತರಿಸಿದರು. ಮುಂದಿನ ದಿನಗಳಲ್ಲಿ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ, ಆಯುರ್ವೇದ ತಜ್ಞರಿಗೆ, ಪ್ರಕೃತಿ ಪ್ರಿಯರಿಗೆ ಸಹಕಾರಿ ಆಗುವಂತೆ ಈ ಜಾಗವನ್ನು ಮೂಲಿಕಾ ವನವಾಗಿ ಬೆಳೆಸುವ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು “ನೀಮಾ” ಅಧ್ಯಕ್ಷ ಡಾ.ರಾಜಾರಾಮ್ ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ. ಜ್ಯೋತಿ, ಡಾ. ಸಾವಿತ್ರಿ, ಡಾ.ರಾಜಗೋಪಾಲ್.ಹೆಚ್.ಆರ್, ಆಯುಷ್ ಇಲಾಖೆಯ ಡಾ.ಅರುಣ್, ಡಾ.ಶೋಭಾ, ಆಯುಷ್ ಇಲಾಖೆಯ ಡಿ.ಎ.ಓ ಕಾವೇರಿಯಪ್ಪ, ಇತರೆ ಸಿಬ್ಬಂದಿಗಳು ಹಾಗೂ ಮೇಕೇರಿಯ ನಾಗರಿಕರು ಭಾಗವಹಿಸಿದ್ದರು.









