
ಸೋಮವಾರಪೇಟೆ ಸೆ.24 NEWS DESK : ಧರ್ಮ ಉಳಿಯಬೇಕು, ಧಾರ್ಮಿಕ ಕ್ಷೇತ್ರಗಳ ರಕ್ಷಣೆಯಾಗಬೇಕು ಎಂದು ಮುಳ್ಳೂರು ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಹೇಳಿದರು. ಪಟ್ಟಣಕ್ಕೆ ಸಮೀಪದ ನೇಗಳೆ ಕರ್ಕಳ್ಳಿ ವೀರಭದ್ರ ದೇವಾಲಯ ಹಾಗೂ ಗ್ರಾಮ ಸಮಿತಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ವೀರಭದ್ರೇಶ್ವರ ವರ್ಧಂತಿ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಈ ಭವ್ಯ ಭಾರತ ಸನಾತನ ಹಿಂದೂ ಧರ್ಮವನ್ನು, ಸಂಸ್ಕೃತಿಯನ್ನು ಹೊಂದಿದೆ. ಬಹಳ ಹಿಂದಿನಿಂದಲೂ ನಮ್ಮ ಧರ್ಮದ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಬಂದಿದೆ, ಇಂದಿಗೂ ನಡೆಯುತ್ತಿದೆ. ಆದರೆ ನಾವುಗಳು ಜಗ್ಗಿಲ್ಲಾ ನಮ್ಮ ಧರ್ಮವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹಿಂದೂಗಳೆಲ್ಲಾರಮೇಲು ಇದೆ. ನಮ್ಮ ಧಾರ್ಮಿಕ ಕೇಂದ್ರಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು. ಧರ್ಮ ಹಾಗೂ ಧಾರ್ಮಿಕ ಕ್ಷೇತ್ರ ಗಳಿಗೆ ಅಪಚಾರ ವಾದಾಗ, ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ದುಷ್ಟರ ಸಂಹಾರಕ್ಕೆ ಅವತರಿಸಿದ ವೀರಭದ್ರನಂತೆ ಆರ್ಭಟಿಸಬೇಕೆಂದರು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ವೀರಭದ್ರ ಸ್ವಾಮಿ ವರ್ಧಂತಿ ಮಹೋತ್ಸವದ ರಾಷ್ಟ್ರೀಯ ಉಪಾಧ್ಯಕ್ಷ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಇಂದು ವೀರಭದ್ರ ಸ್ವಾಮಿ ವರ್ಧಂತಿಯನ್ನು ಹಳ್ಳಿಯಿಂದ ದೆಹಲಿ, ವಿದೇಶಗಳಲ್ಲೂ ಆಚರಿಸುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು. ವೀರಭದ್ರ ಜಾಗೃತಿಯ ಸಂಕೇತವಾಗಿದೆ ಎಂದ ಅವರು, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಕಳೆದ 5 ವರ್ಷಗಳಿಂದ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಭಾರಿಯಿಂದ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿಯೂ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೀರಭದ್ರೇಶ್ವರ ವರ್ಧಂತಿ ಮಹೋತ್ಸವದ ರಾಜ್ಯ ಉಪಾಧ್ಯಕ್ಷರಾದ ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಅಹಂಕಾರ ಹಾಗೂ ನಾನತ್ವ ಮಟ್ಟ ಹಾಕಲು ಅವತರಿಸಿದವನು ವೀರಭದ್ರ ಸ್ವಾಮಿ ಅಂಥ ಸ್ವಾಮಿಯ ವರ್ಧಂತಿ ಆಚರಿಸುವುದು ನಮ್ಮಲ್ಲರ ಭಾಗ್ಯವೆಂದರು. ಡಿ.6 ರಂದು ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ವೀರಭದ್ರೇಶ್ವರ ಪ್ರಶಸ್ತಿ ಪ್ರದಾನ ನಡೆಯಲಿದೆ. ಅಂದು ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಉಪಸ್ತಿತರಿದ್ದರು. ವರ್ಧಂತಿ ಮಹೋತ್ಸವದ ಅಂಗವಾಗಿ ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಜಂಗಮ ಅರ್ಚರ ಸಂಘದ ಅಧ್ಯಕ್ಷ ಹಿರೇಮಠ, ಶೇಕಯ್ಯ, ವೇದಮೂರ್ತಿ ಪುರೋಹಿತ್ವದಲ್ಲಿ ವೀರಭದ್ರ ಸ್ವಾಮಿಗೆ ರುದ್ರಾಭಿಷೇಕ, ಅಷ್ಟೋತ್ತರ, ಬಿಲ್ವಾರ್ಚನೆ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು. ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಉಪಾಧ್ಯಕ್ಷ ಧರ್ಮಪ್ಪ,ಕಾರ್ಯದರ್ಶಿ ರವಿಕುಮಾರ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.









