
ಮಡಿಕೇರಿ NEWS DESK ಸೆ.27 : ಕರ್ನಾಟಕ ರಾಜ್ಯ ಸರಕಾರದಿಂದ ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮತ್ತು ಜಾತಿ ಜನಗಣತಿಯಲ್ಲಿ ಹಾಗೂ ಮುಂದೆ ಕೇಂದ್ರ ಸರಕಾರ ನಡೆಸುವ ಗಣತಿಯ ಸಂದರ್ಭ ಸರ್ವ ಅರೆಭಾಷೆ ಗೌಡರು ಜಾತಿಯ ಕಾಲಂನಲ್ಲಿ GOWDA (ಗೌಡ) ಎಂದು, ಉಪಜಾತಿ ಕಾಲಂನಲ್ಲಿ ಅರೆಭಾಷೆ ಗೌಡ, ಮಾತೃಭಾಷೆ ಕಾಲಂನಲ್ಲಿ ಅರೆಭಾಷೆ ಎಂದು ನಮೂದಿಸುವಂತೆ ಚೇರಳ ಗೌಡ ಸಮಾಜದ ಅಧ್ಯಕ್ಷ ಐಯಂಡ್ರ ರಾಘವಯ್ಯ ಅವರು ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಸ್ತುತ ರಾಜ್ಯ ಸರಕಾರ ನಡೆಸುತ್ತಿರುವ ಮತ್ತು ಮುಂದೆ ಕೇಂದ್ರ ಸರಕಾರ ನಡೆಸಲಿರುವ ಜಾತಿ ಜನಗಣತಿಯಲ್ಲಿ ಕೊಡಗಿನ ಅರೆಭಾಷೆ ಗೌಡರು ಕಡ್ಡಾಯವಾಗಿ ಜಾತಿಯ ಕಾಲಂನಲ್ಲಿ GOWDA (ಗೌಡ) ಎಂದು ನಮೂದಿಸಬೇಕು ಎಂದು ತಿಳಿಸಿದ್ದಾರೆ. ರಾಜ್ಯ ಸರಕಾರ ಈಗಾಗಲೇ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಜಾತಿ ಜನಗಣತಿಯ ಸಮೀಕ್ಷೆಯನ್ನು ಆರಂಭಿಸಿದೆ. ಮುಂದಿನ ವರ್ಷ ಕೇಂದ್ರ ಸರಕಾರ ಕೂಡ ಗಣತಿ ಆರಂಭಿಸಲಿದೆ. ಉಪಜಾತಿಯಲ್ಲಿ ಅರೆಭಾಷೆ ಗೌಡ ಎಂಬುವುದನ್ನು ಪ್ರತ್ಯೇಕ ಕಾಲಂನಲ್ಲಿ ಸೇರಿಸಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಸಲ್ಲಿಸಿದ ಮನವಿಗೆ ಸರಕಾರ ಸ್ಪಂದಿಸಿದೆ. ಸಮುದಾಯ ಬಾಂಧವರು ಎಲ್ಲಾ ವಿವರಗಳನ್ನು ಗಮನದಲ್ಲಿರಿಸಿಕೊಂಡು ಉಪಜಾತಿ ಎನ್ನುವ ಕಾಲಂನಲ್ಲಿ ‘ಅರೆಭಾಷೆ ಗೌಡ’ ಎಂದು ನಮೂದಿಸಬೇಕು ಮತ್ತು ಕಡ್ಡಾಯವಾಗಿ ಎರಡೂ ಗಣತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ. ಮೂಲತಃ ಅರೆಭಾಷೆ ಗೌಡರು ಒಕ್ಕಲಿಗ ಸಮುದಾಯದ ಭಾಗವಾಗಿದ್ದಾರೆ, ಆದರೆ ಅರೆಭಾಷೆ ಗೌಡರ ಶೈಕ್ಷಣಿಕ, ಕಂದಾಯ ಸೇರಿದಂತೆ ಎಲ್ಲಾ ಮೂಲ ದಾಖಲೆಗಳಲ್ಲಿ ‘ಗೌಡ’ ಎಂದೇ ನಮೂದಿಸಲಾಗಿದೆ. ಈಗ ಬದಲಾಯಿಸಿ ಮಾಹಿತಿ ನೀಡಿದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟ ಅರೆಭಾಷೆ ಗೌಡ ಸಮುದಾಯದ ಸಭೆಗಳನ್ನು ನಡೆಸಿ, ಕೊಡಗಿನ ಎಲ್ಲಾ ಗೌಡ ಸಮಾಜಗಳೊಂದಿಗೆ ಸಮಾಲೋಚಿಸಿ GOWDA (ಗೌಡ) ಎಂದು ನಮೂದಿಸಲು ನಿರ್ಣಯ ಕೈಗೊಂಡಿದ್ದು, ಇದಕ್ಕೆ ಚೇರಳ ಗೌಡ ಸಮಾಜ ಸಂಪೂರ್ಣ ಬೆಂಬಲ ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಗಣತಿಯಲ್ಲಿ ತಮ್ಮ ಜಾತಿಗೆ ಇರುವ ಇನ್ನೊಂದು ಹೆಸರು ಎಂಬ ಕಾಲಂ ಕೂಡ ಇದ್ದು, ಇದರಲ್ಲಿ ಒಕ್ಕಲಿಗ, ಕೊಡಗು ಗೌಡ, ಅರೆಭಾಷೆ ಒಕ್ಕಲಿಗ ಎಂದು ನಮೂದಿಸಲು ಸಲಹೆ ನೀಡಿದ್ದಾರೆ. ಎಲ್ಲಾ ಮೂಲ ದಾಖಲೆಗಳನ್ನು ಒಕ್ಕಲಿಗ ಎಂದು ಹೊಂದಿರುವ ಅರೆಭಾಷೆ ಗೌಡ ಸಮುದಾಯದವರು ಇದ್ದರೆ, ಜಾತಿ ಒಕ್ಕಲಿಗ, ಉಪಜಾತಿ ಅರೆಭಾಷೆ ಗೌಡ, ಅರೆಭಾಷೆ ಒಕ್ಕಲಿಗ ಮತ್ತು ಮಾತೃಭಾಷೆ ಅರೆಭಾಷೆ ಎಂದು ನಮೂದಿಸಲು ಯಾವುದೇ ಅಭ್ಯಂತರವಿರುವುದಿಲ್ಲ ಎಂದು ಐಯಂಡ್ರ ರಾಘವಯ್ಯ ಸ್ಪಷ್ಟಪಡಿಸಿದ್ದಾರೆ.








