
ಮಡಿಕೇರಿ ಅ.6 NEWS DESK : ಕಳೆದ 12 ವರ್ಷಗಳಿಂದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಮೀಸಲಾಗಿದ್ದ ಕೊಡಗು ಜಿಲ್ಲಾ ಯುವ ಭವನ ಇದೀಗ ಜಿಲ್ಲಾ ಯುವ ಒಕ್ಕೂಟಕ್ಕೆ ಮರಳಿ ದೊರಕಿದೆ. ಹಿಂದಿನ ಸಾಲಿನಲ್ಲಿ ಮಂಜೂರಾಗಿ ಸುದರ್ಶನ ವೃತದಲ್ಲಿ ನಿರ್ಮಾಣಗೊಂಡಿದ್ದ ಜಿಲ್ಲಾ ಯುವ ಒಕೂಟದ ಜಿಲ್ಲಾ ಯುವ ಭವನವನ್ನು ಬಿಜೆಪಿ ಸರ್ಕಾರ ಜಿಲ್ಲೆಯ ಮೊದಲ ಮಹಿಳಾ ಕಾಲೇಜಿಗೆ ಸೂಕ್ತ ಕಟ್ಟಡ ಇಲ್ಲದ ಕಾರಣ 6 ತಿಂಗಳ ಮಟ್ಟಿಗೆ ಬಿಟ್ಟುಕೊಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಪ್ರಯತ್ನದ ಫಲವಾಗಿ ಮಹಿಳಾ ಕಾಲೇಜನ್ನು ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಮಹಿಳಾ ಕಾಲೇಜಿನ ಕಟ್ಟಕ್ಕೆ ಸ್ಥಳಾಂತರಿಸಲಾಗಿದೆ. ಮಹಿಳಾ ಕಾಲೇಜು ಪಾಂಶುಪಾಲರಾದ ನಿರ್ಮಲ ಅವರು ಯುವ ಭವನದ ಕೀ ಗೊಂಚಲನ್ನು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷರಾದ ಪಿ.ಪಿ.ಸುಕುಮಾರ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಜಿಲ್ಲಾ ಯುವ ಒಕ್ಕೂಟದ ಕಾರ್ಯಧ್ಯಕ್ಷ ಕೂಡ0ಡ ಸಭಾ ಸುಬ್ರಮಣಿ, ಖಜಾಂಚಿ ಕುಂಜಿಲನ ಮದು ಮೋಹನ್, ಸದಸ್ಯ ಡಿ.ನವೀನ್ ದೇರಳ, ಮಡಿಕೇರಿ ತಾಲ್ಲೂಕು ಯುವ ಒಕ್ಕೂಟ ಅಧ್ಯಕ್ಷರಾ ಬಾಳಾಡಿ ದಿಲೀಪ್ ಕುಮಾರ್, ಕಾಲೇಜು ಪ್ರಾಧ್ಯಾಪಕ ವೃಂದದವರು ಹಾಜರಿದ್ದರು. :: ಯುವ ಭವನ ದುರಸ್ತಿಗೆ ಶಾಸಕರ ಭರವಸೆ :: ಸದ್ಯದಲ್ಲಿಯೇ ಶಾಸಕರ ಅನುದಾನದಲ್ಲಿ ಯುವ ಭವನ ದುರಸ್ತಿ ಮಾಡಿ ಕೊಡುವುದಾಗಿ ಶಾಸಕರಾದ ಡಾ.ಮಂತರ್ ಗೌಡ ಜಿಲ್ಲಾ ಯುವ ಒಕ್ಕೂಟ ಪದಾಧಿಕಾರಿಗಳಿಗೆ ಭರವಸೆ ನೀಡಿರುವುದಾಗಿ ಪಿ.ಪಿ.ಸುಕುಮಾರ್ ತಿಳಿಸಿದರು.









