ಸೋಮವಾರಪೇಟೆ ಅ.6 NEWS DESK : ಮಳೆ, ಬಿಸಿಲೆನ್ನದೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡುತ್ತಿರುವ ಶಿಕ್ಷಕರಿಗೆ ನೋಟಿಸ್ ನೀಡಿದ್ದು, ಅದನ್ನು ತಕ್ಷಣವೇ ಹಿಂಪಡೆಯ ಬೇಕೆಂದು ಒತ್ತಾಯಿಸಿ ಶಿಕ್ಷಕರ ಸಂಘ ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಸಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ನೂರಾರು ಶಿಕ್ಷಕರು ಗಣತಿಕಾರ್ಯದಿಂದ ತಾವು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಅವಲತ್ತುಕೊಂಡರು. ಮಳೆ, ಬಿಸಿಲನ್ನು ಲೆಕ್ಕಿಸದೆ ದಸರಾ ರಜೆಯಲ್ಲಿಯೂ ಕರ್ತವ್ಯ ನಿರ್ವಹಿಸಿದ ಸೋಮವಾರಪೇಟೆ, ಕುಶಾಲನಗರ ತಾಲೂಕಿನ 275 ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ ಇದು ಯಾವ ನ್ಯಾಯವೆಂದು ಪ್ರಶ್ನಿಸಿದ್ದಾರೆ. ಸರ್ಕಾರಿ ಕಚೇರಿಗಳು, ಶೌಚಾಲಯ, ಖಾಲಿ ಮನೆಗಳಿಗೂ ಯು.ಹೆಚ್.ಐ.ಡಿ ಕೋಡ್ ಹಾಕಲಾಗಿದೆ, ಗುಡ್ಡಗಾಡು ಪ್ರದೇಕಷ್ಟಶದಲ್ಲಿ ಮನೆ ಹುಡುಕುವುದೇ ಸವಾಲಾಗಿದೆ ಇಂತಹ ಪರಿಸ್ಥಿಯಲ್ಲಿ ಕರ್ತವ್ಯ ನಿರ್ವಹಿಸುವ ನಮ್ಮ ಪರಿಸ್ಥಿತಿ ಹೇಳತೀರದು ಎಂದು ತಮ್ಮ ಸದಸ್ಯೆಯನ್ನು ವಿವರಿಸಿದರು. ಗಣತಿ ಕಾರ್ಯದ ಆ್ಯಪ್ ಹಾಗೂ ಮನೆಗಳು ಸಿಗದೇ ಇದ್ದ ತಾಂತ್ರಿಕ ದೋಷ ಮತ್ತಿತರ ಸಮಸ್ಯೆಯಿಂದ ಐದು ದಿನಗಳ ನಂತರ ಗಣತಿ ಕಾರ್ಯ ವಿಳಂಬವಾಗಿದೆ. ಇದರ ಜತೆಗೆ ಶೇ.20-25 ರಷ್ಟು ಮನೆಗಳು ಖಾಲಿ ಇರುವುದು ಕಂಡುಬಂದಿದೆ. ಇಷ್ಟಾದರೂ ಗಣತಿದಾರರರು ಗಣತಿ ಸಮೀಕ್ಷಾ ಕಾರ್ಯವನ್ನು ಚಾಚುತಪ್ಪದೇ ನಿರ್ವಹಿಸುತ್ತಿದ್ದರೂ ನಿಗದಿತ ಗುರಿ ತಲುಪಿಲ್ಲ ಎಂಬ ಕಾರಣ ನೀಡಿ ಜಿಲ್ಲಾಡಳಿತದ ಒತ್ತಡದಿಂದ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸೋಮವಾರಪೇಟೆ ತಾಲೂಕಿನ ಗಣತಿದಾರ ಶಿಕ್ಷಕರಿಗೆ ವಿನಾಃ ಕಾರಣ ನೋಟಿಸ್ ನೀಡಿರುವುದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ್ದಾರೆ. ಗಣತಿದಾರರ ಶಿಕ್ಷಕರು ಯಾವುದೇ ಲೋಪ ಎಸಗದಿದ್ದರೂ ನೋಟಿಸ್ ನೀಡಿರುವುದನ್ನು ತಕ್ಷಣದಲ್ಲಿ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು. ತಹಸೀಲ್ದಾರ್ ಕೃಷ್ಣಮೂರ್ತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಮನವಿ ಮಾಡಿದರು. ಸಮೀಕ್ಷೆಯ ಸಂದರ್ಭದಲ್ಲಿ ಗಣತಿದಾರರು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಅರಿಯಲು ಸಂಬಂಧಿಸಿದ ಕಂದಾಯ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಮೀಕ್ಷೆಯ ಸ್ಥಳಕ್ಕೆ ಆಗಮಿಸಿ ಗಣತಿದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ತಕ್ಷಣದಲ್ಲಿ ಪರಿಹರಿಸುವ ಮೂಲಕ ಗಣತಿ ಕಾರ್ಯವನ್ನು ಬೇಗನೇ ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಶಿಕ್ಷಕರು ತಿಳಿಸಿದರು. ಪ್ರತಿಭಟನೆಯ ಸಂದರ್ಭ ಜಿಲ್ಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾಧ್ಯಕ್ಷ ಪ್ರಸನ್ನ, ತಾಲ್ಲೂಕು ಅಧ್ಯಕ್ಷ ಬಸವರಾಜ್, ಪ್ರದಾನ ಕಾರ್ಯದರ್ಶಿ ಕವಿತಾ, ನಿರ್ದೇಶಕರುಗಳಾದ ಪ್ರೇಮ, ಆಶಾ, ಸೌಭಾಗ್ಯ,ರವಿ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಶಿಕ್ಷಕರು ಹಾಜರಿದ್ದರು.











