ಪೊನ್ನಂಪೇಟೆ, ಅ.18 NEWS DESK : ಬಾಳೆಲೆಯ ರಾಜಾಪುರ (ದೇವನೂರು) ಗ್ರಾಮಸ್ಥರು ಬಾಳೆಲೆಯಲ್ಲಿ ಸ್ವಚ್ಛತಾ ಶ್ರಮದಾನ ಮಾಡಿದರು. ಸ್ವಚ್ಛ ಕೊಡಗು -ಸುಂದರ ಕೊಡಗು ಯೋಜನೆಗೆ ಕೈಜೋಡಿಸಿರುವ ರಾಜಾಪುರ ಗ್ರಾಮಸ್ಥರು ಬಾಳೆಲೆಯ ಗಣೇಶ ದೇವಸ್ಥಾನದಿಂದ ಕಿಸ್ತೂರಿನವರೆಗಿನ ಒಟ್ಟು 10 ಕಿ.ಮೀ. ಉದ್ದದ ರಸ್ತೆಯ ಎರಡು ಬದಿಗಳಲ್ಲಿ ಬಿದ್ದಿದ್ದ ಕಸ, ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಸಂಗ್ರಹಿಸಿದ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿಗೊಳಿಸಿದರು. ಈ ಸಂದರ್ಭ ಮಾತನಾಡಿದ ಗ್ರಾಮದ ಪ್ರಮುಖರಾದ ಪಾರುವಂಗಡ ಎನ್. ಸೋಮಣ್ಣ, ಸ್ವಚ್ಛ ಕೊಡಗು ಸುಂದರ ಕೊಡಗು ಉತ್ತಮ ಪರಿಕಲ್ಪನೆಯಾಗಿದೆ. ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಈ ಯೋಜನೆ ಹೆಚ್ಚು ಸಹಕಾರಿಯಾಗಿದೆ. ಕೊಡಗಿನ ಪ್ರತಿಯೊಬ್ಬರಲ್ಲೂ ಸ್ವಚ್ಛ ಕೊಡಗು ಕಲ್ಪನೆ ಸ್ವಯಂ ಪ್ರೇರಣೆಯಿಂದ ಮೂಡಿ ಬರಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.











