
ಮಡಿಕೇರಿ ಅ.28 NEWS DESK : ಮಡಿಕೇರಿ ನಗರದಲ್ಲಿ ಸ್ಥಾಪಿತವಾಗಿರುವ ಸ್ವತಂತ್ರ ಭಾರತದ ಪ್ರಪ್ರಥಮ ಮಹಾನ್ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪ್ರತಿಮೆ ಮತ್ತು ಸುತ್ತಲಿನ ಉದ್ಯಾನವನದ ಅಭಿವೃದ್ದಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಮ್ಮ ಶಾಸಕರ ನಿಧಿಯಿಂದ 3 ಲಕ್ಷ ರೂ.ಗಳ ಅನುದಾನ ಒದಗಿಸಿದ್ದಾರೆ. ಇಂದು ಶಾಸಕರು ಮಡಿಕೇರಿಗೆ ಆಗಮಿಸಿದ ಸಂಧರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಹಾಗೂ ಮಡಿಕೇರಿ ನಗರ ಸಭೆಯ ನಾಮನಿರ್ದೇಶನ ಸದಸ್ಯರಾದ ಮಂಡಿರ ಸದಾ ಮುದ್ದಪ್ಪ ಅಭಿವೃದ್ಧಿಗೆ ಸಂಭಂದಿಸಿದ ಅಂದಾಜು ಪಟ್ಟಿಯನ್ನು ಸಲ್ಲಿಸಿದರು. ತಕ್ಷಣವೇ ಸ್ಪಂದಿಸಿದ ಶಾಸಕರು, ಅನುದಾನ ಘೋಷಣೆ ಮಾಡಿದ್ದಾರೆ. ನಂತರ ಮಾತನಾಡಿದ ಡಾ.ಮಂತರ್ ಗೌಡ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ನವರು ದೇಶ ಕಂಡ ಅಪ್ರತಿಮ ಸೇನಾನಿಗಳಾಗಿದ್ದು, ಅವರ ಸಾಧನೆಗಳನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಈ ಮಹಾನ್ ನಾಯಕರಿಗೆ ಸಂಭಂದಿಸಿದ ಪ್ರತಿಯೊಂದು ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು. ಈ ಸಂಧರ್ಭ ಮೂಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಪ್ರಕಾಶ್ ಆಚಾರ್ಯ ಹಾಗೂ ಪ್ರಮುಖರು ಶಾಸಕರೊಂದಿಗೆ ಉಪಸ್ಥಿತರಿದ್ದರು.








