ಮಡಿಕೇರಿ ಅ.29 NEWS DESK : ಇತ್ತೀಚಿಗಿನ ಕೌನ್ ಬನೇಗಾ ಕರೋಡ್ ಪತಿ (KBC) ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ ರ ಎದುರು ಕುಳಿತಿದ್ದ ಓರ್ವ ಬಾಲಕನ ವರ್ತನೆ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಯಿತು. ಕೆಲವರು ಆ ಹುಡುಗನ ವರ್ತನೆಯನ್ನು ‘ಅಹಂಕಾರ’, ‘ಅಸಭ್ಯತೆ’ ಎಂದು ಕರೆದು ಟೀಕಿಸಿದರು. ಈ ಕಾರ್ಯಕ್ರಮದ ನಂತರ ಮಕ್ಕಳಲ್ಲಿ ಕಾಣುವ ಕೆಲವೊಂದು ಅತಿಯಾದ ವರ್ತನೆಗಳ ಬಗ್ಗೆ ಜಾಲತಾಣಗಳಲ್ಲಿ ವಿವಿಧ ರೀತಿಯ ಚರ್ಚೆಗಳು ಆಗ ತೊಡಗಿತು. ಈ ಕಂತಿನಲ್ಲಿ ಆ ಹುಡುಗ ಸ್ವಲ್ಪ ಅತಿಯಾಗಿ ವರ್ತಿಸಿದರೂ , ಇನ್ನು ಕೆಲವು ಮಕ್ಕಳಲ್ಲಿ ಇದೇ ರೀತಿಯ ಕೆಲವೊಂದು ನಡವಳಿಕೆಗಳು ಕಂಡು ಬರಬಹುದು. ಅಂತಹವುಗಳನ್ನು ವೈದ್ಯಕೀಯ ಮತ್ತು ಮಾನಸಿಕ ದೃಷ್ಟಿಯಿಂದ ನೋಡಿದಾಗ ಅದು ಅಹಂಕಾರವಲ್ಲ, ಬದಲಾಗಿ ಅತಿಯಾದ ಉತ್ತೇಜನ ಎಂಬ ಸಮಸ್ಯೆಯ ಲಕ್ಷಣ ಎಂದು ಕಂಡು ಬರುತ್ತದೆ. ಅತಿಯಾದ ಚುರುಕುತನ, ನಿಗ್ರಹ-ಹಿಡಿತವಿಲ್ಲದ ಮಾತುಗಳು, ನಿರಂತರ ಚಲನೆ, ಕ್ಷಣಮಾತ್ರವೂ ಶಾಂತವಾಗಿ ಕುಳಿತು ಕೊಳ್ಳದ ಸ್ವಭಾವ ಇರುವ ಮಕ್ಕಳು ನಮ್ಮ ಶಾಲೆಗಳಲ್ಲಿ, ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಡೆ ಇರುತ್ತಾರೆ. ಈ ಮಕ್ಕಳಲ್ಲಿ ಕೆಲವೊಮ್ಮೆ ಹೈಪರ್‌ಆಕ್ಟಿವಿಟಿ ಅಥವಾ ಇಂಪಲ್ಸಿವ್ ನೈಸರ್ಗಿಕತೆಯ ಲಕ್ಷಣಗಳಿರಬಹುದು. ಇವು ಪೋಷಕರ ತಪ್ಪು ಶಿಕ್ಷಣದ ಲಕ್ಷಣವಲ್ಲ, ಬದಲಾಗಿ ಮಕ್ಕಳ ಮೆದುಳಿನ ಉತ್ತೇಜನ ವ್ಯವಸ್ಥೆಯ ಅಸಮತೋಲನವೇ ಮುಖ್ಯ ಕಾರಣ. :: ಆಹಾರ ಮತ್ತು ಮೆದುಳಿನ ಸಂಬಂಧ :: ಕೆಲವೊಂದು ಆಹಾರಗಳು ಈ ರೀತಿಯ ಪ್ರತಿಕ್ರಿಯೆಗೆ ಕಾರಣವಾಗುತ್ತದೆ. ಇದರಲ್ಲಿ ಬಹುಮಂದಿ ಪೋಷಕರು ನಿರ್ಲಕ್ಷಿಸುವ ಒಂದು ಪ್ರಮುಖ ಕಾರಣ — “ಜಂಕ್ ಫುಡ್” ಕೊಬ್ಬು ಮತ್ತು ಸಕ್ಕರೆಯುಳ್ಳ ಆಹಾರವನ್ನು ನಾಲ್ಕು ದಿನ ತಿಂದರೂ ಮೆದುಳಿನ “ಹಿಪ್ಪೋಕ್ಯಾಂಪಸ್” ಎಂಬ ಭಾಗದ ಕಾರ್ಯ ವ್ಯತ್ಯಯಗೊಳ್ಳುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಇದು ಮೆದುಳಿನ ನೆನಪು ಮತ್ತು ಭಾವನಾತ್ಮಕ ನಿಯಂತ್ರಣವನ್ನು ಹಾಳುಮಾಡುತ್ತದೆ. ನಂತರ ಮಕ್ಕಳು ಅತಿಚುರುಕು, ಕೋಪಿಷ್ಠ ಅಥವಾ ನಿರ್ಲಕ್ಷ್ಯವಾಗುತ್ತಾರೆ. ಇದಕ್ಕೆ ಪರಿಹಾರವಾಗಿ ನಿಧಾನವಾಗಿ “ಜಂಕ್ ಫುಡ್” ಕಡಿಮೆ ಮಾಡುವುದು ಒಳ್ಳೆಯದು. ಅದನ್ನು ಹಠಾತ್ ನಿಷೇಧಿಸಬೇಡಿ, ಬದಲಿಗೆ ಮನೆಯಲ್ಲಿಯೇ ಅವರಿಗಿಷ್ಟವಾದ ತಿಂಡಿಗಳನ್ನು ಆರೋಗ್ಯಕರ ರೀತಿಯಲ್ಲಿ ತಯಾರಿಸಿ ಕೊಡಿ. ಮಕ್ಕಳನ್ನು ಅಡುಗೆಯಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿ. ಇದು ಅವರಿಗೆ ನಿಯಂತ್ರಣ ಕಲಿಸುತ್ತದೆ. ಸಾಧಾರಣವಾಗಿ ಪೋಷಕರು ಮಾಡುವ ಇನ್ನೊಂದು ತಪ್ಪು — “ಒಳ್ಳೆಯ ಕೆಲಸ ಮಾಡಿದರೆ ಚಾಕ್ಲೆಟ್ , ಪಿಜ್ಜಾ ಕೊಡುತ್ತೇವೆ” ಎಂಬ ಒಂದು ರೀತಿಯ ಬಹುಮಾನ ಪದ್ಧತಿ. ಇದರಿಂದ ಮಕ್ಕಳು ಅದನ್ನು ಭಾವನಾತ್ಮಕವಾಗಿ ಬಯಸಲು ಶುರು ಮಾಡುತ್ತಾರೆ. :: ಸ್ಕ್ರೀನ್ ಟೈಮ್ ಮತ್ತು ಮೆದುಳಿನ ಉದ್ದೀಪನ :: ಟಿವಿ, ಮೊಬೈಲ್ ಗೇಮ್‌ಗಳೆಲ್ಲವೂ ಮೆದುಳಿನ ಬಹುಮಾನ ವ್ಯವಸ್ಥೆ ( ರಿವಾರ್ಡ್ ಸಿಸ್ಟಮ್ ) ಮೇಲೆ ನೇರ ಪ್ರಭಾವ ಬೀರುತ್ತವೆ. “ಜಂಕ್ ಫುಡ್ ” ನಂತೆ ಇವು ಕೂಡ ಕ್ಷಣಿಕ ಸಂತೋಷವನ್ನು ನೀಡುತ್ತವೆಯಾದರೂ ಸಹನೆಯ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಮಕ್ಕಳು ಎಲ್ಲವನ್ನೂ ತಕ್ಷಣ ಬಯಸುತ್ತಾರೆ — “ಇದೀಗ ಬೇಕು, ಇಲ್ಲದಿದ್ದರೆ ಕೋಪ” ಎನ್ನುವ ಸ್ಥಿತಿ ಉಂಟಾಗುತ್ತದೆ. ಆದ್ದರಿಂದ ದಿನದ ಕೆಲ ಸಮಯ ಟಿವಿ, ಮೊಬೈಲ್ ನೋಡದಿರುವ “ಸ್ಕ್ರೀನ್ ಟೈಮ್ ಫ್ರೀ” ಮಾಡಬೇಕು. ಊಟದ ಸಮಯದಲ್ಲಿ ಅಥವಾ ನಿದ್ರೆಗೆ ಮುಂಚೆ ಮೊಬೈಲ್ ಕೊಡಬೇಡಿ. ಬದಲಿಗೆ ಹೊರಗೆ ಆಟವಾಡುವುದು, ಪುಸ್ತಕ ಓದುವುದು, ಅಥವಾ ಕುಟುಂಬದ ಜೊತೆ ಮಾತನಾಡುವುದಕ್ಕೆ ಉತ್ತೇಜನ ನೀಡಿದರೆ ಅವರ ಮನಸ್ಸನ್ನು ಸರಿಯಾದ ದಿಕ್ಕಿಗೆ ತಿರುಗಿಸಬಹುದು. :: ನಿಧಾನವಾಗಿ ಕಲಿಯಬೇಕಾದ ಕೌಶಲ್ಯ – ಸಹನೆ :: ಮಕ್ಕಳು ಯಾವುದನ್ನಾದರೂ ಕೇಳಿದಾಗ ತಕ್ಷಣ ಕೊಡಬೇಡಿ. ಚಾಕ್ಲೇಟ್ ಬೇಕೆಂದರೆ “ಊಟದ ನಂತರ ಕೊಡೋಣ” ಎಂದು ಹೇಳಿ. ಆಟಿಕೆ ಬೇಕಾದರೆ “ಮುಂದಿನ ವಾರದ ಒಳಗೆ ನೋಡೋಣ” ಎಂದು ಯೋಜನೆ ಮಾಡಿ. ಪ್ರತಿ ಬಾರಿ ಕಾದು ಪಡೆಯುವ ಅನುಭವದಿಂದ ಅವರ ಮೆದುಳು ಭಾವನಾತ್ಮಕ ನಿಯಂತ್ರಣ ಕಲಿಯುತ್ತದೆ — ಇದು ಸಹನೆ ಮತ್ತು ಆತ್ಮನಿಗ್ರಹದ ಮೂಲಾಧಾರ. :: ಮಕ್ಕಳಿಗೆ ಇಂತಹವರೆಂಬ ಮುದ್ರೆ ಬೇಡ — ಪ್ರೀತಿಯ ಮಾರ್ಗದರ್ಶನ ಬೇಕು :: ಅತಿಚುರುಕು ಮಕ್ಕಳನ್ನು “ತಲೆ ಕೆಟ್ಟವರು”, “ದುರಾಚಾರಿ” ಎಂದು ಕರೆಯ ಬೇಡಿ. ಬಹುಶಃ ಅದು ಅವರ ತಪ್ಪಾಗಿಲ್ಲದೇ ಆ ಸಮಯದಲ್ಲಿ ಅವರ ಮೆದುಳು ಅತಿಯಾಗಿ ಕಾರ್ಯ ನಿರ್ವಹಿಸುತ್ತಿರಬಹುದು. ಇಂತಹ ಮಕ್ಕಳಿಗೆ ನಿಯಮಿತ ಊಟದ ಸಮಯ, ನಿದ್ರೆ ಮತ್ತು ಆಟದ ಸಮಯದಂತಹ ಶಾಂತ, ನಿರಂತರ ವೇಳಾಪಟ್ಟಿಯ ಅಗತ್ಯವಿದೆ. ಉಸಿರಾಟ ವ್ಯಾಯಾಮಗಳು, ಧ್ಯಾನ, ಸಂಗೀತ ಅಥವಾ ಪೋಷಕರ ಜೊತೆ ಕಳಕಳಿಯ ಮಾತುಗಳು ಅವರ ಮನಸ್ಸನ್ನು ನಿಧಾನವಾಗಿ ಶಾಂತಗೊಳಿಸುತ್ತವೆ. :: ಪೋಷಕರು ಮಾದರಿ ಆಗಬೇಕು :: ಮಕ್ಕಳು ತಾವು ನೋಡಿದಂತೆ ವರ್ತಿಸುತ್ತಾರೆ. ಪೋಷಕರು ಸಹನಶೀಲರಾಗಿದ್ದರೆ, ಮಾತನಾಡುವ ಧ್ವನಿಯಲ್ಲಿ ಶಾಂತಿ ಇದ್ದರೆ, ಮಕ್ಕಳು ಅದನ್ನೇ ಪ್ರತಿಬಿಂಬಿಸುತ್ತಾರೆ. ಅತಿಚುರುಕುತನ ಎಂದರೆ ಸದಾ ನಕಾರಾತ್ಮಕವಲ್ಲ. ಅದು ಶಕ್ತಿ, ಕುತೂಹಲ ಮತ್ತು ಸೃಜನಶೀಲತೆಯ ಸಂಕೇತವೂ ಆಗಿರಬಹುದು. ಆದರೆ ಅದಕ್ಕೆ ಸರಿಯಾದ ಮಾರ್ಗದರ್ಶನ ಬೇಕು. ಆಹಾರದಲ್ಲಿ ನಿಯಂತ್ರಣ, ಸ್ಕ್ರೀನ್ ಸಮಯದಲ್ಲಿ ಸಮತೋಲನ, ಮತ್ತು ಭಾವನಾತ್ಮಕ ಬೆಂಬಲ — ಇವುಗಳ ಸಮನ್ವಯದಿಂದ ಆ ಅದೇ “ಅತಿಚುರುಕು” ಮಗು ನಾಳೆಯಲ್ಲೊಂದು ದಿನ ಕೇಂದ್ರೀಕೃತ, ಆತ್ಮವಿಶ್ವಾಸಿ ಮತ್ತು ಸಹಾನುಭೂತಿ ಹೊಂದಿದ ವ್ಯಕ್ತಿ ಆಗಿ ಬೆಳೆಯಬಹುದು. ಅಹಂಕಾರವೆಂದು ತಪ್ಪಾಗಿ ಅರ್ಥ ಮಾಡಿ ಕೊಳ್ಳುವ ಚುರುಕುತನದಲ್ಲಿಯೂ ಕೆಲವೊಮ್ಮೆ ಒಂದು ಅತಿಯಾದ ಉತ್ತೇಜಿತ ಹೃದಯದ ಸಹಜ ಕಿರುಚಾಟ ಅಡಗಿರಬಹುದು. ಅದನ್ನು ಆಲಿಸಿ, ಅರ್ಥಮಾಡಿಕೊಳ್ಳಿ.












