
ವಿರಾಜಪೇಟೆ NEWS DESK ಅ.31 : ಕೊಡಗು ಜಿಲ್ಲಾ ಪೊಲೀಸ್ ವಿರಾಜಪೇಟೆ ಉಪ ವಿಭಾಗ, ವಿರಾಜಪೇಟೆ ವೃತ್ತ, ವಿರಾಜಪೇಟೆ ನಗರ ಠಾಣೆ ಹಾಗೂ ವಿರಾಜಪೇಟೆ ಗ್ರಾಮಾಂತರ ಠಾಣೆ ಇವರ ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆಯಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ನಡೆಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್ .ಪೊನ್ನಣ್ಣ ಅವರು “ಏಕತೆಗಾಗಿ ಓಟ 2025” ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಮೈದಾನದಿಂದ ವಿರಾಜಪೇಟೆ ನಗರದಾದ್ಯಂತ ಕಾಲ್ನಡಿಗೆ ಮೂಲಕ ಆಯೋಜಕರೊಂದಿಗೆ ಹೆಜ್ಜೆ ಹಾಕಿದ ಶಾಸಕರು ಏಕತೆಯ ಸಂದೇಶ ಸಾರಿದರು. ಭಾರತದ ಸಾರ್ವಭೌಮತೆ ಉಳಿಸಿಕೊಳ್ಳಲು ದೇಶದ ನಾಗರೀಕರಲ್ಲಿ ಏಕತಾ ಭಾವನೆ ಅತೀ ಮುಖ್ಯವಾಗಿದೆ. ಬ್ರಿಟಿಷರ ಕಪಿಮುಷ್ಠಿಯಿಂದ ಸ್ವಾತಂತ್ರ್ಯ ಹೋರಾಟಗಾರರು ನಮಗೆ ತಂದುಕೊಟ್ಟ ಸ್ವತಂತ್ರ ಭಾರತದ ಸ್ವರ್ಣ ಯುಗವನ್ನು ಮುಂದುವರಿಸಲು ಪ್ರತಿಯೊಬ್ಬ ಭಾರತೀಯನು ಒಗ್ಗಟ್ಟಾಗಿ ಇರುವುದು ಅತಿ ಅವಶ್ಯಕವಾಗಿದೆ. ದೇಶದ ವಿಷಯ ಬಂದ ಸಂದರ್ಭದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ದೇಶದ ಪ್ರಜೆಗಳಾದ ನಮ್ಮೊಳಗೆ ಮೂಡಬಾರದು ಎಂಬ ಸದುದ್ದೇಶದಿಂದ ಹಾಗೂ ಏಕತೆಯ ಸಂದೇಶವನ್ನು ಸಾರಲು ಪೊಲೀಸ್ ಇಲಾಖೆಯವರು ಕೈಗೊಂಡ ಈ ಕಾರ್ಯಕ್ರಮ ಅತ್ಯಂತ ಮಹತ್ವ ಪಡೆದಿದೆ. ಶಿಸ್ತು, ಪ್ರಾಮಾಣಿಕತೆ ಹಾಗೂ ಪ್ರಬುದ್ಧತೆಗೆ ಹೆಸರಾಗಿರುವ ನಮ್ಮ ಪೊಲೀಸರು ಸಮಾಜದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂಬುವುದನ್ನು ಖಾತ್ರಿಪಡಿಸಲು ಸದಾ ಎಚ್ಚರದಿಂದಿರಬೇಕು ಎಂದು ಕರೆ ನೀಡಿದರು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.








