ಮಡಿಕೇರಿ ನ.5 NEWS DESK : ಕನ್ನಡ ಭವನ ಕೊಡಗು ಜಿಲ್ಲಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ.9ರಂದು ಲೇಖಕಿ ರುಬೀನಾ ಎಂ.ಎ ಅವರ ಚೊಚ್ಚಲ ಕೃತಿ “ಕಣ್ಣಾ ಮುಚ್ಚಾಲೆ” ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ನಗರದ ಪತ್ರಿಕಾ ಭವನದಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟಿಸಲಿದ್ದು, ಕೊಡಗು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ.ಅನಂತಶಯನ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಕನ್ನಡ ಭವನ ಕೇಂದ್ರ ಸಮಿತಿ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್, ಹಿರಿಯ ಸಾಹಿತಿ ಭಾರದ್ವಾಜ್ ಕೆ.ಆನಂದ ತೀರ್ಥ, ಕಣ್ಣಾ ಮುಚ್ಚಾಲೆ ಪುಸ್ತಕದ ಬರಹಗಾರ್ತಿ ಎಂ.ಎ.ರುಬೀನಾ ಹಾಗೂ ಮರ್ಕರ ಪೋಸ್ಟ್ ಪತ್ರಿಕೆ ಸಂಪಾದಕ ಜೈರೋಸ್ ಥೋಮಸ್ ಅಲೆಕ್ಸಾಂಡರ್ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಕನ್ನಡ ಭವನದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. “ಕಣ್ಣಾ ಮುಚ್ಚಾಲೆ” ಕಾದಂಬರಿ ಕುಟುಂಬವೊಂದರ ಏಳುಬೀಳಿನ ಹಾದಿಯ ಮೇಲೆ ಬೆಳಕು ಚೆಲ್ಲಿದೆ. ತನ್ನ ಬದುಕನ್ನು ಕಟ್ಟಿಕೊಳ್ಳಲು ಮತ್ತು ಬದುಕಿನ ಗೌರವವನ್ನು ರಕ್ಷಿಸಿಕೊಳ್ಳಲು ಕಥಾ ನಾಯಕಿ ಪಡುವ ಶ್ರಮದ ಹಂದರ ಇದರಲ್ಲಿದೆ. ಜೀವನದ ತೂಗುಯ್ಯಾಲೆಯ ಏರಿಳಿತದ ಪರಿವೇ ಇಲ್ಲದೆ, ಸದಾ ದಾಂಗುಡಿಯಿಡುವ ಸಮಯದ ಜೊತೆ ಹೊಂದಿಕೊಳ್ಳುವ ರಾಧಾಳ ಕಥೆ “ಕಣ್ಣಾ ಮುಚ್ಚಾಲೆ” ಯಾಗಿದೆ.
*ರುಬೀನಾ ಎಂ.ಎ ಪರಿಚಯ* ರುಬೀನಾ ಎಂ.ಎ. ಇವರು ದಿ.ಅಬೂಬಕ್ಕರ್ ಮತ್ತು ಐಸಮ್ಮ ದಂಪತಿಗಳ ದ್ವಿತೀಯ ಪುತ್ರಿಯಾಗಿ ವಿರಾಜಪೇಟೆ ತಾಲ್ಲೂಕಿನ ಬೊಳ್ಳುಮಾಡು ಗ್ರಾಮದಲ್ಲಿ ಜನಿಸಿ, ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೊಳ್ಳುಮಾಡು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ, ವಿರಾಜಪೇಟೆಯ ಜಯಪ್ರಕಾಶ್ ನಾರಾಯಣ ಮೆಮೋರಿಯಲ್ ಬಾಲಿಕ ಪ್ರೌಢ ಶಾಲೆ ಮತ್ತು ಸೋಮವಾಪೇಟೆ ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮತ್ತು ವಿರಾಜಪೇಟೆ ಕಾವೇರಿ ಮಹಿಳಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿದ ನಂತರ ಹಲವು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರ ಸಾಮಾಜಿಕ ಕಳಕಳಿ ಮತ್ತು ಬರಹಗಳನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ, ಅಲ್ಲದೆ ಪ್ರಶಸ್ತಿಗಳನ್ನು ಕೂಡ ನೀಡಿವೆ. ಇವರು ರಚಿಸಿದ ಧಾರಾವಾಹಿಗಳು ಮತ್ತು ಬರಹಗಳು ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿದೆ.











