ಮಡಿಕೇರಿ ನ.10 NEWS DESK : ಕಳೆದ 25 ವರ್ಷಗಳಿಂದ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬಿದ್ದಿದ್ದ ಮಡಿಕೇರಿ-ಗಾಳಿಬೀಡು-ಕಡಮಕಲ್ಲು ರಸ್ತೆ ದುರಸ್ತಿಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರ ಪ್ರಯತ್ನದ ಫಲವಾಗಿ ರೂ.3.50 ಕೋಟಿ ಬಿಡುಗಡೆಯಾಗಿದ್ದು, ನ.14 ರಂದು ಭೂಮಿಪೂಜೆ ನೆರವೇರಲಿದೆ ಎಂದು ಗಾಳಿಬೀಡು ವಲಯ ಕಾಂಗ್ರೆಸ್ ಪ್ರಮುಖರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಲಯ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಸುಭಾಷ್ ಆಳ್ವ ಅವರು, ಮಡಿಕೇರಿ ತಾಲ್ಲೂಕಿನ ಪ್ರಮುಖ ಸಂಪರ್ಕ ಕೊಂಡಿಯಾದ ಮಡಿಕೇರಿ-ಗಾಳಿಬೀಡು-ಕಡಮಕಲ್ಲು ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಕೊನೆಗೂ ಮೂಹೂರ್ತ ಕೂಡಿಬಂದಿದ್ದು, ಶಾಸಕರು ಗ್ರಾಮಸ್ಥರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಶಾಸಕರಾಗಿ ಚುನಾಯಿತರಾದ ಸಂದರ್ಭವೇ ರೂ.2 ಕೋಟಿ ಹಣವನ್ನು ಬಿಡುಗಡೆಗೊಳಿಸಿದ್ದಾರೆ. ರಸ್ತೆ ಸಮಸ್ಯೆಯನ್ನು ಅರಿತು ಹೆಚ್ಚುವರಿಯಾಗಿ ಅನುದಾನ ಒದಗಿಸಿದ್ದಾರೆ. ನ.14 ರಂದು ಬೆಳಿಗ್ಗೆ 9.30ಕ್ಕೆ ಗಾಳಿಬೀಡು ಗ್ರಾಮದ ಕೋಳಿಗೂಡು ಎಂಬಲ್ಲಿ ಶಾಸಕರು ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಹೇಳಿದರು. ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೋಳುಮುಡಿಯನ ಅನಂತಕುಮಾರ್ ಮಾತನಾಡಿ, ಹಿಂದಿನ ಜನಪ್ರತಿನಿಧಿಗಳು ಮಾಡಲಾಗದ ಕೆಲಸವನ್ನು ಹಾಲಿ ಶಾಸಕರು ಮಾಡಿ ತೋರಿಸಿದ್ದಾರೆ. ಇದರಿಂದ ಜನರಿಗೆ ಹೆಚ್ಚು ಉಪಯೋಗವಾಗಲಿದೆ. ಈ ರಸ್ತೆಯಲ್ಲಿ ಹಲವು ರೆಸಾರ್ಟ್‍ಗಳಿದ್ದು, ಹೆಚ್ಚಿನ ಸಂಖ್ಯೆಯ ವಾಹನಗಳು ಸಂಚರಿಸುತ್ತವೆ. ಸ್ಥಳೀಯ ಗ್ರಾ.ಪಂ ರಸ್ತೆ ಕಾಮಗಾರಿ ಮುಗಿಯುವವರೆಗೆ ಭಾರೀ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಬೇಕು. ಆ ಮೂಲಕ ನೂತನ ರಸ್ತೆ ದೀರ್ಘಕಾಲ ಉಳಿಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸದಸ್ಯ ಐಲಪಂಡ ಪುಷ್ಪ ಪೂಣಚ್ಚ, ಅಕ್ರಮ ಸಕ್ರಮ ಸಮಿತಿ ಸದಸ್ಯ ಹರಿಪ್ರಸಾದ್ ಕೋಚನ, ವಲಯ ಕಾಂಗ್ರೆಸ್ ಸದಸ್ಯರುಗಳಾದ ಮದನ್ ಕೊಂಬಾರನ ಹಾಗೂ ಗಣಪತಿ ಉಪಸ್ಥಿತರಿದ್ದರು.











