ಮಡಿಕೇರಿ ನ.10 NEWS DESK : ರಾಷ್ಟ್ರೀಯ ಮಟ್ಟದ ಭಾರತೀಯ ನೌಕಾಪಡೆ ಕ್ವಿಜ್ “ಥಿನ್ಕ್ಯೂ-2025”ನಲ್ಲಿ ಕೊಡಗಿನ ಸೈನಿಕ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ ಫೈನಲ್ ಹಂತವನ್ನು ತಲುಪಿ ತಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ. ಕೇರಳದಲ್ಲಿದ ಎಝಿಮಲಾದಲ್ಲಿರುವ ಭಾರತೀಯ ನೌಕಾ ಅಕಾಡೆಮಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಕೊಡಗಿನ ಸೈನಿಕ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಧ್ರುವ ವಿ.ಭಾರದ್ವಾಜ್ ಹಾಗೂ ಅಚಲ್ ಥೇನುವಾ ಸ್ಪರ್ಧಿಸಿದ್ದರು. ವಿದ್ಯಾರ್ಥಿಗಳ ಪ್ರದರ್ಶನವು ತೀಕ್ಷ್ಣ ಬುದ್ಧಿಮತ್ತೆ, ತಂಡದ ಮನೋಭಾವ ಮತ್ತು ನಿಜವಾದ ಸ್ಪರ್ಧಾ ಮನೋಭಾವವನ್ನು ಪ್ರತಿಬಿಂಬಿಸಿತು.
ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ನೌಕಾ ಅಕಾಡೆಮಿಯ ಕಮಾಂಡಂಟ್ ವೈಸ್ ಅಡ್ಮಿರಲ್ ಮನೀಷ್ ಚಡ್ಡಾ, ಎ ವಿ ಎಸ್ ಎಂ, ವಿ ಎಸ್ ಎಂ ಅವರಿಂದ ಗೌರವ ಹಾಗೂ ಬಹುಮಾನ ನೀಡಲಾಯಿತು. ಈ ಯುವ ಸಾಧಕರು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ.ತ್ರಿಪಾಠಿ, ಪಿ ವಿ ಎಸ್ ಎಂ, ಎ ವಿ ಎಸ್ ಎಂ, ಎನ್ ಎಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಅಪರೂಪದ ಅವಕಾಶವನ್ನು ಪಡೆದರು. ಇದೇ ಸಂದರ್ಭ ಸೈನಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳ ಕುತೂಹಲ ಮತ್ತು ಆತ್ಮವಿಶ್ವಾಸವನ್ನು ದಿನೇಶ್ ಕೆ.ತ್ರಿಪಾಠಿ ಪ್ರಶಂಸಿಸಿದರು. ವಿದ್ಯಾರ್ಥಿಗಳ ಯಶಸ್ಸಿಗೆ ಶಾಲೆಯ ವಿಜ್ಞಾನ ಶಿಕ್ಷಕರಾದ ದಾದಾ ಧರೆಪ್ಪ ಕುಸನಾಳೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡಿದರು. ಈ ಕುರಿತು ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ಇದು ಕೊಡಗು ಸೈನಿಕ ಶಾಲೆಯ ಕುಟುಂಬದ ಎಲ್ಲರಿಗೂ ಹೆಮ್ಮೆಯ ಕ್ಷಣವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳ ಈ ಸಾಧನೆ ಅವರ ಶಿಸ್ತಿನ, ತ್ಯಾಗದ ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿಯ ಪ್ರತಿಬಿಂಬವಾಗಿದೆ” ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು. ಶಾಲೆಯು ಮುಂದಿನ ದಿನಗಳಲ್ಲಿ ತಮ್ಮ ವಿದ್ಯಾರ್ಥಿಗಳಲ್ಲಿ ಧೈರ್ಯ, ಕುತೂಹಲ ಮತ್ತು ನಿಷ್ಠೆಯ ಮೌಲ್ಯಗಳನ್ನು ಬೆಳೆಸಿ, ಅವರಲ್ಲಿ ಉನ್ನತ ಸ್ಥಾನವನ್ನು ಕಲ್ಪಿಸುವ ಉದ್ದೇಶವನ್ನು ಜೀವಂತವಾಗಿಡುತ್ತಿದೆ ಎಂದರು. ಇದರೊಂದಿಗೆ ವಿದ್ಯಾರ್ಥಿಗಳನ್ನು ಹಾಗೂ ಸಿಬ್ಬಂದಿವರ್ಗದವರನ್ನು ಅಭಿನಂದಿಸಿದರು.











