ಕುಶಾಲನಗರ ನ.11 NEWS DESK : ಭಾರತ ದೇಶದ ಮೂಲ ನಿವಾಸಿಗಳ ಮೂಲ ಧರ್ಮ ಬೌದ್ಧ ಧರ್ಮವಾಗಿದ್ದು, ಭಗವಾನ್ ಬುದ್ಧ ನಮ್ಮ ಮೂಲ ಗುರು ಅವರ ಪಂಚಶೀಲ ತತ್ವಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಹೋಗಬೇಕು. ಮುಂದಿನ ಪೀಳಿಗೆಗೆ ಬುದ್ಧನ ವಿಚಾರಧಾರೆಯನ್ನು ಮನದಟ್ಟು ಮಾಡಿಕೊಡಬೇಕು ಎಂದು ಕರ್ನಾಟಕ ಬುದ್ಧ ಧಮ್ಮ ಸಮಿತಿ ಒಕ್ಕೂಟದ ಗೌರವಾಧ್ಯಕ್ಷ ಬಿ.ಗೋಪಾಲ್ ಹೇಳಿದರು. ಕರ್ನಾಟಕ ಬುದ್ಧ ಧಮ್ಮ ಸಮಿತಿಗಳ ಒಕ್ಕೂಟದ ವತಿಯಿಂದ ಕುಶಾಲನಗರ ಮಹಾಲಕ್ಷ್ಮಿ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಬುದ್ಧ ಧಮ್ಮ ಚಿಂತನ ಮಂಥನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೌರ್ಯ ಸಾಮ್ರಾಜ್ಯದಲ್ಲಿ ಸಾಮ್ರಾಟ ಅಶೋಕ ಚಕ್ರವರ್ತಿ ಆಳ್ವಿಕೆ ಸಂದರ್ಭ ಬೌದ್ಧ ಧರ್ಮ ಸುಂದರವಾದ ಪ್ರೀತಿ, ಸಹಬಾಳ್ವೆ, ಸಹೋದರತ್ವವನ್ನು ಬಿತ್ತಿ ಜನಸಾಮಾನ್ಯರಲ್ಲಿ ಉತ್ತಮ ಬಾಂಧವ್ಯದ ಬುನಾದಿ ಹಾಕಿ ಕೊಟ್ಟಿತ್ತು ಎಂದು ಹೇಳಿದರು. ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವೃತ್ತ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿದ್ದಪ್ಪ ಮಾತನಾಡಿ, ಭಗವಾನ್ ಬುದ್ಧನ ವಿಚಾರಧಾರೆಯನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿ ದಿನ ಅರ್ಧ ಗಂಟೆ ಬಿಡುವು ಮಾಡಿಕೊಂಡು ಭಗವಾನ್ ಬುದ್ಧರ ಪಂಚಶೀಲ ತತ್ವ ಅರ್ಥೈಸಿಕೊಳ್ಳಬೇಕು. ತಮ್ಮ ಮನೆಯಲ್ಲಿ ಬೌದ್ಧ ಧರ್ಮ ಆಚರಣೆ ಮಾಡಿ ಸಮಾಜಕ್ಕೆ ಮಾದರಿಯಾಗಿ ಎಂದು ಹೇಳಿದರು. ಕರ್ನಾಟಕ ಬುದ್ಧ ಧಮ್ಮ ಸಮಿತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರೊ.ಹೆಚ್.ರಾಚಪ್ಪ ಮಾತನಾಡಿ ಎಲ್ಲಾ ಜಾತಿ ಜನಾಂಗದವರಿಗೂ ಅವರದೇ ಆದ ಧರ್ಮಗಳು ಇವೆ. ಅದೇ ರೀತಿ ಈ ದೇಶದ ಮೂಲ ನಿವಾಸಿಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ ಸಮುದಾಯ ಕೂಡ ದ್ರಾವಿಡರು, ಈ ದೇಶ ದ್ರಾವಿಡ ದೇಶ ಎಂದರು. ನಮ್ಮ ಊರಿನಲ್ಲಿ ನಮ್ಮ ಮನೆಯಲ್ಲಿ ಬೌದ್ಧ ಧರ್ಮವನ್ನು ಭಗವಾನ್ ಬುದ್ಧರನ್ನು ಪೂಜಿಸೋಣ ಆರಾಧಿಸೋಣ ಎಂದು ರಾಚಪ್ಪ ಹೇಳಿದರು. ಕರ್ನಾಟಕ ಬುದ್ಧ ಧಮ್ಮ ಸಮಿತಿಗಳ ಒಕ್ಕೂಟದ ಖಜಾಂಚಿ ಲಕ್ಷ್ಮಣ್ ಮಾತನಾಡಿ ವಿಶ್ವ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರು ತೋರಿಸಿದ್ದ ಮಾರ್ಗದಲ್ಲಿ ನಾವು ನಮ್ಮ ಮುಂದಿನ ಪೀಳಿಗೆ ಮುನ್ನಡೆಯಬೇಕು ಎಂದರು. ಕರ್ನಾಟಕ ಬುದ್ಧ ಧಮ್ಮ ಸಮಿತಿಗಳ ಒಕ್ಕೂಟದ ಅಧ್ಯಕ್ಷ ಪ್ರೊ. ಆರ್.ಮಹದೇವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ದೇಶದ ಮೂಲ ಧರ್ಮ ಬೌದ್ಧ ಧರ್ಮ,ನಮ್ಮ ನಿಮ್ಮೇಲ್ಲರ ರಾಜ
ಚಂದ್ರಗುಪ್ತ ಮೌರ್ಯ ಎಂದರು.ನಾವೆಲ್ಲರೂ ನಮ್ಮ ಮೂಲ ಧರ್ಮ ಬೌದ್ಧ ಧರ್ಮಕ್ಕೆ ಮರಳಬೇಕು. ಭಗವಾನ್ ಬುದ್ಧನನ್ನು ಆರಾಧಿಸಬೇಕು ಎಂದು ಹೇಳಿದರು. ಈ ಸಂದರ್ಭ ಒಕ್ಕೂಟದ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್,ಸದಸ್ಯ ತಿಪ್ಪೆಸ್ವಾಮಿ , ಕಾರ್ಯಕ್ರಮ ಸಂಚಾಲಕ ಸೋಮಯ್ಯ , ದಸಂಸ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ.ರಾಜು,ದಲಿತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಯಪ್ಪ ಹಾನಗಲ್, ಬಹುಜನ ಸಮಾಜ ಪಾರ್ಟಿ ಮಾಜಿ ಅಧ್ಯಕ್ಷ ಮೋಹನ್ ಮೌರ್ಯ, ಸಿಪಿಐಎಂಎಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಿರ್ವಾಣಪ್ಪ,ದಸಂಸ ಜಿಲ್ಲಾ ಸಂಚಾಲಕ ದಿವಾಕರ್,ರಾಜ್ಯ ಮುಖಂಡ ಗೋವಿಂದಪ್ಪ, ನಿವೃತ್ತ ಸರ್ಕಾರಿ ನೌಕರರು ಸಂಘದ ಉಪಾಧ್ಯಕ್ಷ ಬಿ.ಸಿ. ರಾಜು, ಎಸ್.ಸಿ,ಎಸ್. ಟಿ.ನೌಕರ ಸಂಘದ ಜಿಲ್ಲಾಧ್ಯಕ್ಷ ಮಹೇಂದ್ರ, ದಲಿತ ಮುಖಂಡರಾದ ಸೋಮಣ್ಣ, ದಿನೇಶ್, ಸುನಿಲ್, ದೋಡಯ್ಯ ,ದಾಮೋದರ್, ಮುತ್ತಪ್ಪ ಪಾಲ್ಗೊಂಡಿದ್ದರು. ಇದೇ ಸಂದರ್ಭ ಅತಿಥಿಗಳು ಗೌತಮ ಬುದ್ಧನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ನಮಿಸಿದರು.










