ಮಡಿಕೇರಿ ನ.11 NEWS DESK : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ. ಘಟಕ, ರಾಜ್ಯಶಾಸ್ತ್ರ ವಿಭಾಗ ಹಾಗೂ ವಿರಾಜಪೇಟೆ ತಾಲ್ಲೂಕು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ‘ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೌ.ನ್ಯಾ.ನಟರಾಜ್, ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಇತಿಹಾಸ, ಬೆಳವಣಿಗೆಯನ್ನು ವಿವರಿಸುತ್ತಾ ಸಾರ್ವಜನಿಕ ಜೀವನದಲ್ಲಿ ಕಾನೂನಿನ ಅರಿವು ಮತ್ತು ಮಹತ್ವವನ್ನು ತಿಳಿಸಿದರು. ಯುವ ಸಮುದಾಯದಲ್ಲಿ ಕಾನೂನಿನ ಜಾಗೃತಿಯ ಕೊರತೆಯಿಂದಾಗಿ ದಿನನಿತ್ಯದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಕಾನೂನಿನ ಬೆಂಬಲವನ್ನು ಪಡೆಯುವಂತೆ ಕಿವಿ ಮಾತು ಹೇಳಿದರು. ವಿರಾಜಪೇಟೆ ಜೆ.ಎಂ.ಎಫ್.ಸಿ. ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌ.ನ್ಯಾ. ಮಂಜುನಾಥ ಆರ್. ಮಾತನಾಡಿ, ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ನಾಗರೀಕರಿಗೆ ಇರಬೇಕಾದ ವಿವಿಧ ಕಾನೂನುಗಳ ಬಗ್ಗೆ ತಿಳಿಸಿದರು. ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಸಿ.ಕೆ.ಪೂವಣ್ಣ ಮಾತನಾಡಿ, ಕಾನೂನು ಎಂಬುದು ಕೇವಲ ನ್ಯಾಯಾಲಯಕ್ಕಾಗಲೀ, ವಕೀಲರಿಗಾಗಲೀ ಮಾತ್ರವೇ ಸೀಮಿತವಲ್ಲ. ಪ್ರತೀ ವ್ಯಕ್ತಿಯು ಪ್ರತೀ ಹಂತದಲ್ಲಿ ಕಾನೂನಿನ ವ್ಯಾಪ್ತಿಗೆ ಒಳಪಡುತ್ತಾನೆ. ಆದ್ದರಿಂದ ವಿಶೇಷವಾಗಿ ಯುವ ಸಮುದಾಯವು ಇಂತಹ ಕಾರ್ಯಕ್ರಮಗಳಿಂದ ಮಾಹಿತಿಗಳನ್ನು ತಮ್ಮ ಸುತ್ತಮುತ್ತಲಿನ ಸಮಾಜದ ಜನರಿಗೆ ತಿಳಿಸುವ ಮೂಲಕ, ಜವಾಬ್ದಾರಿಯುತ ಪ್ರಜೆಯಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಿ.ಕೆ.ಸರಸ್ವತಿ ಜೀವಿ ಪ್ರಪಂಚದಲ್ಲಿ ಯೋಚನಾ ಶಕ್ತಿ, ವಿವೇಚನೆಯೊಂದಿಗೆ ವಿಭಿನ್ನವಾಗಿ ಗುರುತಿಸಿಕೊಂಡಿರುವ ಮಾನವನು, ತಾನು ಬದುಕುತ್ತಿರುವ ವ್ಯವಸ್ಥೆಯಲ್ಲಿ ಕಾನೂನು ಅರಿವಿನ ಮೂಲಕ ಮಾತ್ರವೇ ತನ್ನನ್ನು ತಾನು ಉತ್ತಮ ಪಡಿಸಿಕೊಳ್ಳಬಲ್ಲ ಎಂಬುದನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ವಿರಾಜಪೇಟೆ ಜೆ.ಎಂ.ಎಫ್.ಸಿ. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಗೌ.ನ್ಯಾ. ಪ್ರದೀಪ ಪೋತದಾರ, ವಿರಾಜಪೇಟೆ ಪ್ಯಾನಲ್ ವಕೀಲರಾದ ಅಮೃತ್ ಸೋಮಯ್ಯ, ಕಾಲೇಜಿನ ಐ,ಕ್ಯೂ.ಎ.ಸಿ. ಸಂಚಾಲಕರಾದ ಪ್ರೊ.ಬಸವರಾಜು ಕೆ.ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ದಿವ್ಯ ಎಂ.ಬಿ. ಉಪಸ್ಥಿತರಿದ್ದರು. ತೃತೀಯ ಬಿ.ಎ.ವಿದ್ಯಾರ್ಥಿನಿ ವಂದನಾ ನಿರೂಪಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ಹೇಮಂತ್ ಕುಮಾರ್ ವಂದಿಸಿದರು.











