

ಮಡಿಕೇರಿ ನ.11 NEWS DESK : ಕೊಡವ ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (ಎಐಎಂಎಲ್) ವಿಭಾಗದ ವಿದ್ಯಾರ್ಥಿ ಸಂಘ “ಅವಿನ್ಯಂ” ವತಿಯಿಂದ “ಇನ್ಸ್‌ಪೈರ್-2025” ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿ.ಟಿ.ಯು. ಶೈಕ್ಷಣಿಕ ಸಭಾ ಸದಸ್ಯರು ಹಾಗೂ ಮಂಗಳೂರು ಕ್ಯಾನರಾ ಎಂಜಿನಿಯರಿಂಗ್ ಕಾಲೇಜಿನ ಉಪಪ್ರಾಚಾರ್ಯರಾದ ಡಾ.ಡೆಮಿಯನ್ ಆಂಟೋನಿ ಡಿ’ಮೆಲ್ಲೊ ಪಾಲ್ಗೊಂಡು ಮಾತನಾಡಿ, “ನಾವು ಏನು ಮಾಡುತ್ತೇವೆ ಎಂಬುದರ ಮೇಲೆ ಕೇಂದ್ರೀಕರಿಸಿ, ಜೀವನದಲ್ಲಿ ಶಿಸ್ತನ್ನು ಪಾಲಿಸುವುದು ಯಶಸ್ಸಿನ ಮೂಲ” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರಾಚಾರ್ಯರಾದ ಡಾ. ಎಂ.ಬಸವರಾಜ್ ಮಾತನಾಡಿ, ವಿದ್ಯಾರ್ಥಿಗಳು ಪ್ರಸ್ತುತ ತಂತ್ರಜ್ಞಾನಗಳ ನವೀಕರಣದೊಂದಿಗೆ ಸದಾ ಹೊಸ ವಿಷಯಗಳನ್ನು ಕಲಿಯಲು ಸಿದ್ಧರಾಗಿರಬೇಕು ಎಂದು ಕರೆ ನೀಡಿದರು. ಮಂಗಳೂರು ಕ್ಯಾನರಾ ಎಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಡಾ. ಸುನೀಲ್ ಕುಮಾರ್, ಎನ್.ಎಂ.ಎ.ಎಂ.ಐ.ಟಿ. ನಿಟ್ಟೆಯ ಪ್ರೊಫೆಸರ್ ಡಾ. ರಾಜು ಹಾಗೂ ನವಿಗೊ ಸೊಲ್ಯೂಷನ್ಸ್, ಮಂಗಳೂರುನ ಸಿನಿಯರ್ ಸಾಫ್ಟ್‍ವೇರ್ ಇಂಜಿನಿಯರ್ ಮತ್ತು ಟೀಮ್ ಲೀಡ್ ಲೋಹಿತ್ ವಿದ್ಯಾರ್ಥಿಗಳಿಗೆ ಪ್ರಸ್ತುತ ಐಟಿ ಕ್ಷೇತ್ರದ ನವೀನ ತಂತ್ರಜ್ಞಾನಗಳ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ದ್ವಿತೀಯ ವರ್ಷದ ಎಐಎಂಎಲ್ ವಿಭಾಗದ ವಿದ್ಯಾರ್ಥಿ ವರ್ಶಿತ್ ನಿರ್ಮಿಸಿದ “ಚಾಟ್ ಬಾಟ್” ಅನ್ನು ಮುಖ್ಯ ಅತಿಥಿಗಳು ಅನಾವರಣಗೊಳಿಸಿದರು. ಹಾಗೆಯೇ “ಸಂವಿದ್” ಎಂಬ ವಿಭಾಗದ ಮಾಸಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ವಿಭಾಗದ ಸಂಯೋಜಕಿ ಪ್ರೊ. ಬಾಬಿತಾ ಪಿ.ಕೆ, ವಿಭಾಗದ ಮುಖ್ಯಸ್ಥ ಡಾ. ರಾಮಕೃಷ್ಣ ಬಿ.ಹೆಚ್, ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮಿಸ್ ನೀಲಂ ತಿಮ್ಮಯ್ಯ ಸೇರಿದಂತೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಮಾಣವಚನ ಸ್ವೀಕರಿಸಿದ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಅತಿಥಿಗಳು ಶುಭ ಹಾರೈಸಿದರು.











