ಮಡಿಕೇರಿ ನ.12 NEWS DESK : ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ 72 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನ.14 ರಿಂದ 20 ರವರೆಗೆ ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಸಹಯೋಗದೊಂದಿಗೆ ನಡೆಯಲಿದೆ. ಸಹಕಾರಿ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿರುವ ಪೊನ್ನಂಪೇಟೆಯ ಚಿರಿಯಪಂಡ ಕೆ. ಉತ್ತಪ್ಪ ‘ಕೊಡಗು ಸಹಕಾರ ರತ್ನ’ ಪ್ರಶಸ್ತಿ, ಸೋಮವಾರಪೇಟೆ ತಾಲೂಕಿನ ಶುಂಠಿ ಗ್ರಾಮದ ಎಚ್.ಎಸ್. ಮುದ್ದಪ್ಪ, ಮಡಿಕೇರಿ ತಾಲೂಕು ಅರುವತ್ತೋಕ್ಲು ಗ್ರಾಮದ ತಳೂರು ಎ. ಕಿಶೋರ್ ಅವರಿಗೆ ‘ಶ್ರೇಷ್ಠ ಸಹಕಾರಿ ಪ್ರಶಸ್ತಿ’ ಮತ್ತು ಶನಿವಾರಸಂತೆಯ ನಿವಾಸಿ ದೇವಾಂಬಿಕ ಮಹೇಶ್ ಅವರಿಗೆ ‘ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ‘ಉನ್ನತಿ ಭವನ’ದ ಸಭಾಂಗಣದಲ್ಲಿ ನ.20 ರಂದು ಏರ್ಪಡಿಸಲಾಗಿದೆ.
:: ಚಿರಿಯಪಂಡ ಕೆ. ಉತ್ತಪ್ಪ – ಕೊಡಗು ಸಹಕಾರ ರತ್ನ :: ಜಿಲ್ಲೆಗೊಬ್ಬರಂತೆ ‘ಕೊಡಗು ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. 2025 ರ ಕೊಡಗು ಸಹಕಾರ ರತ್ನಕ್ಕೆ ಭಾಜನರಾದವರು ಶ್ರೀ ಚಿರಿಯಪಂಡ ಕೆ. ಉತ್ತಪ್ಪ. ಪೊನ್ನಂಪೇಟೆಯ ಚಿರಿಯಪಂಡ ಕೆ. ಉತ್ತಪ್ಪನವರು 1966 ರಲ್ಲಿ ಮತ್ತೂರು ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಪ್ರಥಮ ಬಾರಿಗೆ ನಿರ್ದೇಶಕರಾಗಿ ಸಹಕಾರ ವಲಯಕ್ಕೆ ಪಾದಾರ್ಪಣೆ ಮಾಡಿ, ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ 1971 ರಿಂದ ನಿರಂತರವಾಗಿ ಅಂದರೆ ಕಳೆದ 51 ವರ್ಷಗಳಿಂದ ನಿರ್ದೇಶಕರಾಗಿ, ಸುಮಾರು 38 ವರ್ಷಗಳ ಕಾಲ ಅಧ್ಯಕ್ಷರಾಗಿ ತಮ್ಮ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಮಡಿಕೇರಿಯ ಜನತಾ ಬಜಾರ್‍ನಲ್ಲಿ ಒಂದು ಅವಧಿಗೆ ನಿರ್ದೇಶಕರಾಗಿ, ವಿರಾಜಪೇಟೆಯ ಮಾರಾಟ ಮಹಾಮಂಡಳದಲ್ಲಿ ಸತತ 3 ಅವಧಿಗೆ ನಿರ್ದೇಶಕರಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಿರುತ್ತಾರೆ.
:: ಎಚ್.ಎಸ್. ಮುದ್ದಪ್ಪ – ಶ್ರೇಷ್ಠ ಸಹಕಾರಿ ಪ್ರಶಸ್ತಿ :: ಸೋಮವಾರಪೇಟೆ ತಾಲೂಕಿನ ಶುಂಠಿ ಗ್ರಾಮದ ಶ್ರೀ ಎಚ್.ಎಸ್. ಮುದ್ದಪ್ಪನವರು 1976 ರಲ್ಲಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು, ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 1981 ರಿಂದ 1995 ರವರೆಗೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಆಡಳಿತ ಮಂಡಳಿಯಲ್ಲಿದ್ದ ಇವರು 1990 ರಿಂದ 1992 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಉಳಿದ 13 ವರ್ಷಗಳ ಅವಧಿಯಲ್ಲಿ ನಿರ್ದೇಶಕರಾಗಿದ್ದರು. 1994 ರಿಂದ 1997 ರವರೆಗೆ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ, 1995 ರಿಂದ 1998 ರವರೆಗೆ ಕೊಡಗು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿದ್ದರು. 1995 ರಿಂದ 1998ರವರೆಗೆ ಕೋಮಾರ್ಕ್ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.
:: ತಳೂರು ಎ. ಕಿಶೋರ್ ಕುಮಾರ್ – ಶ್ರೇಷ್ಠ ಸಹಕಾರಿ ಪ್ರಶಸ್ತಿ :: ಮಡಿಕೇರಿ ತಾಲೂಕು ಅರುವತ್ತೋಕ್ಲು ಗ್ರಾಮದ ಶ್ರೀ ತಳೂರು ಎ. ಕಿಶೋರ್ ಕುಮಾರ್‍ರವರು 1991 ರಲ್ಲಿ ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗುವ ಮೂಲಕ ಸಹಕಾರ ಸೇವೆಯನ್ನು ಪ್ರಾರಂಭಿಸಿ ನಿರ್ದೇಶಕರಾಗಿ ಪುನಃ ಅಧ್ಯಕ್ಷರಾಗಿ ಸತತವಾಗಿ 34 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಅಲ್ಲಿ 2009 ರಿಂದ 2014 ರವರೆಗೆ ನಿರ್ದೇಶಕರಾಗಿದ್ದ ಇವರು ಈ ಸಮಯದಲ್ಲಿ ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದಲ್ಲಿ ನಾಮನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಕೇಂದ್ರ ಕೈಮಗ್ಗ ಮತ್ತು ಜವಳಿ ಮಂಡಳಿ, ನವದೆಹಲಿ ಇದರ ನಿರ್ದೇಶಕರಾಗಿ 2002 ರಿಂದ 2007 ರವರೆಗೆ ಹಾಗೂ ಭಾರತ ಸರ್ಕಾರದ ಕಾಫಿ ಮಂಡಳಿಯ ಸದಸ್ಯರಾಗಿ 2022 ರಿಂದ ಸೇವೆ ಸಲ್ಲಿಸುತ್ತಿದ್ದಾರೆ.
:: ದೇವಾಂಬಿಕ ಮಹೇಶ್ – ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿ :: ದೇವಾಂಬಿಕ ಮಹೇಶ್, ಶನಿವಾರಸಂತೆಯ ನಿವಾಸಿಯಾಗಿದ್ದು 1977 ರಲ್ಲಿ ಅಧ್ಯಕ್ಷರಾಗಿ ಮಹಿಳಾ ಸಹಕಾರ ಸಂಘ ನಿ., ಶನಿವಾರಸಂತೆಯಲ್ಲಿ 2015 ರವರೆಗೆ ಸುದೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ತಮ್ಮ ಅತ್ತೆ ಶ್ರೀಮತಿ ಕಮಲಮ್ಮ ಮಹಾಂತಪ್ಪನವರು ಸ್ಥಾಪಿಸಿದ ಸದರಿ ಮಹಿಳಾ ಸಹಕಾರ ಸಂಘದ ಬೆಳವಣಿಗೆಗಾಗಿ ಶ್ರಮಿಸಿದ ಇವರು 2006 ರಲ್ಲಿ ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸಿರುತ್ತಾರೆ ಮತ್ತು ಮಾತೃವಂದನಾ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿರುತ್ತಾರೆ. ಮಹಿಳೆಯರ ಅಭ್ಯದ್ಯಕ್ಕಾಗಿ ಶಿಶುವಿಹಾರ, ಹೊಲಿಗೆ ತರಬೇತಿ ಕೇಂದ್ರ, ನಿಟ್ಟಿಂಗ್ ತರಬೇತಿ, ಅಣಬೆ ತಯಾರಿಕೆ, ಕ್ಯಾಂಡಲ್ ಮತ್ತು ಸೋಪು ತಯಾರಿಕೆಯ ತರಗತಿಗಳನ್ನು ನಡೆಸಿರುತ್ತಾರೆ. 2015 ರಿಂದ ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ 10 ವರ್ಷಗಳಿಂದ ನಿರ್ದೇಶಕಿಯಾಗಿ ಮುಂದುವರೆಯುತ್ತಿದ್ದಾರೆ.
:: ಆಲೆಮಾಡ ಕಾವೇರಮ್ಮ – ಉತ್ತಮ ಸಹಕಾರಿ ಸಿಬ್ಬಂದಿ ಪ್ರಶಸ್ತಿ :: ಆಲೆಮಾಡ ಕಾವೇರಮ್ಮನವರು ಕೊಡಗು ಜಿಲ್ಲಾ ಸಹಕಾರ ಯೂನಿಯನ್ನಿನ ವ್ಯವಸ್ಥಾಪಕಿಯಾಗಿ 1969 ರಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡರು. ಜಿಲ್ಲಾ ಸಹಕಾರ ಯೂನಿಯನ್‍ಗೆ ಶಿಕ್ಷಣ, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಅಗತ್ಯವಾದ ಸಭಾಂಗಣ ಮತ್ತು ಕಟ್ಟಡವನ್ನು ಪುರಸಭೆ ವ್ಯಾಪ್ತಿಯ ಪೆನ್‍ಶನ್ ಲೇನ್‍ನಲ್ಲಿ ನಿವೇಶನ ಹೊಂದಲು ಹೆಚ್ಚಿನ ಶ್ರಮ ವಹಿಸಿರುತ್ತಾರೆ.
ಸಹಕಾರ ಸಂಸ್ಥೆಗಳ ದೇಣಿಗೆ ಮಾತ್ರದಿಂದ 2 ಮಹಡಿಗಳ ಸುಸಜ್ಜಿತ ಕಟ್ಟಡ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ್ದು, ತಮ್ಮ 38 ವರ್ಷಗಳ ಸೇವಾವಧಿಯಲ್ಲಿ ಚಟುವಟಿಕೆಯಿಂದ ಕೂಡಿ ನಿಷ್ಕಂಳಕವಾಗಿ ಸೇವೆ ಸಲ್ಲಿಸಿರುತ್ತಾರೆ.












