ಮಡಿಕೇರಿ NEWS DESK ನ.14 : ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದ ಕುಡಿಯ ಸಮೂಹ ವಾಸವಿರುವ ಎರಡು ಕಾಲೋನಿಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಇಲ್ಲಿನ ನಿವಾಸಿಗಳು ನಗರದ ಪತ್ರಿಕಾ ಭವನದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಬೆಟ್ಟತ್ತೂರು ಗ್ರಾಮದ ಕೊಯಿನಾಲ್‌ಮಲೆ ಅರಣ್ಯ ಪ್ರದೇಶದ ಕಾಲೋನಿಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕವಿಲ್ಲ. ಈ ಬಗ್ಗೆ ನೂರಾರು ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದೇವೆ, ಪರಿಹಾರ ಮಾತ್ರ ದೊರಕಿಲ್ಲ. ಕಾಲೋನಿಗಳಿಗೆ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಲು ‘ಅರಣ್ಯ ಇಲಾಖೆ’ಯೆ ಅಡ್ಡಿಯಾಗಿದೆಯೆಂದು ಅಲ್ಲಿನ ನಿವಾಸಿ ಕೆ.ಎ.ಸೋಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ನೋವನ್ನು ತೋಡಿಕೊಂಡರು. ಈ ಹಿಂದಿನ ಸರಕಾರದ ಅವಧಿಯಲ್ಲಿ ಬೆಟ್ಟತ್ತೂರಿನ ಈ ಕಾಲೋನಿಗಳ ಬಳಿಯ ಸಮುದಾಯ ಭವನಕ್ಕೆ ವಿದ್ಯುತ್ ಸೌಲಭ್ಯವನ್ನು ಗ್ರಾಮೀಣ ವಿದ್ಯುದೀಕರಣ ಯೋಜನೆಯಡಿ ಒದಗಿಸಲಾಗಿದೆ. ಹೀಗಿದ್ದೂ ಅಲ್ಲೇ ಸಮೀಪದ ಮನೆಗಳು ಇಂದಿಗೂ ಕಗ್ಗತ್ತಲೆಯಲ್ಲೇ ಉಳಿದು ಬಿಟ್ಟಿವೆ. ಕಾಲೋನಿ ನಿವಾಸಿ ಕೆ.ಎ.ಸೋಮಯ್ಯ ಹೇಳುವಂತೆ, ಕಳೆದ ಚುನಾವಣೆಯ ಸಂದರ್ಭ ಕಾಲೋನಿಗೆ ವಿದ್ಯುತ್ ಒದಗಿಸುವುದಾಗಿ ಸುಮಾರು ಎಂಭತ್ತು ವಿದ್ಯುತ್ ಕಂಬಗಳನ್ನು ತಂದು ಹಾಕಲಾಗಿತ್ತು. ಚುನಾವಣೆ ಕಳೆದ ಬಳಿಕ ಅದು ಹಾಗೆಯೇ ಹಿಂದಕ್ಕೆ ಹೋಗಿಬಿಟ್ಟಿದೆ. ಒಂದು ಭಾಗದಲ್ಲಿ ಹತ್ತು ಕಟುಂಬಗಳು ವಾಸವಿದೆಯಾದರೆ, ಮತ್ತೊಂದು ಕಾಲೋನಿಯಲ್ಲಿ ಏಳು ಕುಡಿಯ ಸಮೂಹಕ್ಕೆ ಸೇರಿದ ಕುಟುಂಬಗಳು ಹಲ ದಶಕಗಳಿಂದ ಬದುಕು ನಡೆಸುತ್ತಿವೆ. ಆದರೆ, ಇವರಿಗೆ ಕನಿಷ್ಟ ಮೂಲ ಸೌಲಭ್ಯ ಒದಗಿಸಬೇಕೆನ್ನುವ ಕಿಂಚಿತ್ ಕಾಳಜಿ ಯಾರಲ್ಲೂ ಇದ್ದಂತೆ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಅವರು ಮಾತನಾಡಿ, ಇಂದಿಗೂ ನಮ್ಮ ನಡುವೆ ಕನಿಷ್ಟ ಮೂಲಸೌಲಭ್ಯಗಳಿಂದ ವಂಚಿತ ಬಡ ಮಂದಿ ಇದ್ದಾರೆ. ಅವರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಕರೆ ತರುವ ಕಾರ್ಯ ನಡೆಯಬೇಕಿದೆ. ಈ ನಿಟ್ಟಿನಲ್ಲಿ ತಾನು ಹಾಡಿಗಳಿಗೆ ಭೇಟಿಯನ್ನಿತ್ತು, ಅಲ್ಲಿನ ಸಮಸ್ಯೆಗಳ ಬಗ್ಗೆ ಅರಿತು ಸಂಬಂಧಂಪಟ್ಟ ಇಲಾಖೆಯೊಂದಿಗೆ ಸರ್ಕಾರದ ಗಮನ ಸೆಳೆೆಯುವ ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದರು. ಬೆಟ್ಟತ್ತೂರಿನ ಎರಡು ಕಾಲೋನಿಗಳಿಗೆ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆಯನ್ನು ತಾನು ಸಂಪರ್ಕಿಸಿ, ಕಾಲೋನಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವಂತೆ ತಿಳಿಸಿದ್ದೆ, ಅವರು ಸದ್ಯದಲ್ಲೆ ಮಾಡಿಕೊಡುವುದಾಗಿ ತಿಳಿಸಿದ್ದಾರಾದರು, ಅದು ಕಾರ್ಯಗತವಾಗಿಲ್ಲವೆಂದರು. ಕೊಡಗು ಜಿಲ್ಲೆಯಲ್ಲಿ 2018ರ ಮುಂಗಾರಿನ ಸಂದರ್ಭ ಉಂಟಾದ ಜಲ ಪ್ರಳಯದಿಂದ ಸಂಭವಿಸಿದ ಭೂ ಕುಸಿತಗಳಿಂದ ಮನೆಗಳನ್ನು ಕಳೆದುಕೊಂಡ ಹಲವರಿಗೆ ಇಂದಿಗೂ ಮನೆ ಲಭಿಸಿಲ್ಲ. ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬಡ ಮಂದಿ ಕಳೆದ ಹಲವು ದಶಕಗಳಿಂದ ಸಂಬಂಧಪಟ್ಟವರಿಗೆ ಅರ್ಜಿಗಳನ್ನು ಸಲ್ಲಿಸಿಕೊಂಡು ಬಂದಿದ್ದಾರಾದರು ಅವರಿಗೆ ಇಲ್ಲಿಯವರೆಗೆ ಮನೆಗಳು ದೊರಕಿಲ್ಲವೆಂದು ಟೀಕಿಸಿದರು. ಭೂ ಕುಸಿತದಿಂದ 2018ರಲ್ಲಿ ಮನೆ ಕಳೆದುಕೊಂಡ ಎರಡನೇ ಮೊಣ್ಣಂಗೇರಿಯ ನಿವಾಸಿ ಪಿ.ಬಿ.ರಾಧ ಅವರು ಮಾತನಾಡಿ, ಮನೆ ಸಂಪೂರ್ಣ ನಾಶವಾದ ಸಂದರ್ಭವೆ ತಾನು ಮನೆಗಾಗಿ ಅರ್ಜಿಯನ್ನು ಸಲ್ಲಿಸಿದ್ದೇನೆ. ಆದರೆ, ಇಲ್ಲಿಯವರೆಗೆ ಮನೆ ದೊರಕಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಮಡಿಕೇರಿ ನಗರದ ಮಹದೇವಪೇಟೆಯ ಜಯ ಹಾಗೂ ಮಲ್ಲಿಕಾರ್ಜುನ ನಗರದ ಪಿ.ಎ.ಪದ್ಮ ಅವರು ಮಾತನಾಡಿ, ಬಡವರ್ಗದ ನಾವು ಮನೆಗಾಗಿ ಹಲವು ಬಾರಿ ನಗರಸಭೆಗೆ ಅರ್ಜಿಗಳನ್ನು ಸಲ್ಲಿಸಿದ್ದೇವೆ, ಆದರೆ ಇಲ್ಲಿಯವರೆಗೆ ಪರಿಗಣಿಸಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಂತೆಯಂಡ ಬೋಪಯ್ಯ ಉಪಸ್ಥಿತರಿದ್ದರು.










