ಸೋಮವಾರಪೇಟೆ ನ.15 NEWS DESK : ವಿದ್ಯಾರ್ಥಿಗಳು ಪ್ರವಾಸದ ಸಂದರ್ಭದಲ್ಲಿ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿ ಅವುಗಳ ಇತಿಹಾಸ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಕುರಿತು ಪ್ರಾಚ್ಯ ಪ್ರಜ್ಞೆ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಂಡು ಸ್ಮಾರಕಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು
ಸೋಮವಾರಪೇಟೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಂ.ವಿ.ಮಂಜೇಶ್ ಹೇಳಿದರು. ಕರ್ನಾಟಕ ಪುರಾತತ್ವ, ಸಂಗ್ರಹಾಲಯಗಳು ಮತ್ತು
ಪರಂಪರ ಇಲಾಖೆಯ ಸಹಯೋಗದಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಸೋಮವಾರಪೇಟೆ ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ಶನಿವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ “ಪ್ರಾಚ್ಯ ಪ್ರಜ್ಞೆ” ಕುರಿತು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಇಂದು ನಾವು ಪ್ರಾಚೀನ ಕಾಲದ ಕಲೆ, ಸಂಸ್ಕೃತಿ, ಪರಂಪರೆಯನ್ನು ಪ್ರತಿಬಿಂಬಿಸುವ ಪ್ರಾಚ್ಯ ವಸ್ತು ಸ್ಮಾರಕಗಳು, ಸಂಗ್ರಹಾಲಯಗಳ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಕರ್ನಾಟಕದ ಪ್ರಾಚೀನ ಸ್ಮಾರಕಗಳ ಉಳಿಸುವಿಕೆಯಲ್ಲಿ ಇರುವ ಸವಾಲುಗಳ ಬಗ್ಗೆ ನಾವು ಜಾಗ್ರತರಾಗುವ ಮೂಲಕ ಅವುಗಳ ಸಂರಕ್ಷಣೆಗೆ ಒತ್ತು ನೀಡಬೇಕಿದೆ ಎಂದು ಮಂಜೇಶ್ ಹೇಳಿದರು. ಪ್ರಾಚೀನ ಸಂಗ್ರಹಾಲಯಗಳ ಮಹತ್ವದ ಕುರಿತು ಮಾತನಾಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಭಾರತದ ಇತಿಹಾಸ ಪ್ರತಿಬಿಂಬಿಸುವ ಸ್ಮಾರಕಗಳು ನಮ್ಮ ನಾಗರಿಕತೆಯ ಪ್ರಖ್ಯಾತ ಚಿಹ್ನೆಗಳಾಗಿವೆ ಎಂದರು. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಪ್ರಾಚೀನ ಸ್ಮಾರಕಗಳು, ಶಿಲ್ಪಕಲೆಗಳು, ವಾಸ್ತುಶಿಲ್ಪ ಹಾಗೂ ಪರಂಪರೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಸಹಕಾರಿಯಾಗಿವೆ ಎಂದು ಹೇಳಿದರು. ಪ್ರಾಚ್ಯ ಪ್ರಜ್ಞೆ ಯ ಮಹತ್ವ ವಿವರಿಸಿದ ತಾಲ್ಲೂಕು ಸ್ಪರ್ಧಾ ನೋಡಲ್ ಅಧಿಕಾರಿ ಎಸ್.ಎಸ್.ಶಿವಕುಮಾರ್, ದೇಶದ ಇತಿಹಾಸ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ಪ್ರಾಚೀನ ಸ್ಮಾರಕಗಳ ಬಗ್ಗೆ ಅರಿವು ಮೂಡಿಸಿ ಅವುಗಳ ಸಂರಕ್ಷಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ದಿಸೆಯಲ್ಲಿ ಇಂತಹ ಸ್ಪರ್ಧೆ ಏರ್ಪಡಿಸಲಾಗುತ್ತಿದೆ ಎಂದರು. ಪ್ರಾಚ್ಯ ಸಂಗ್ರಹಾಲಯಗಳ ಮಹತ್ವದ ಕುರಿತು ಮಾತನಾಡಿದ
ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಟಿ.ವಿ.ಶೈಲಾ, ದೇಶದ ಪ್ರತಿಯೊಂದು ಸ್ಮಾರಕಗಳು ಹಾಗೂ ಸಂಗ್ರಹಾಲಯಗಳು ದೇಶದ ಸಂಪತ್ತು. ಇವುಗಳ ಕಲೆ, ಸಾಹಿತ್ಯ, ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಹಾಗೂ ಇವುಗಳನ್ನು ಭವಿಷ್ಯತ್ತಿನ ದೃಷ್ಟಿಯಿಂದ ಉಳಿಸಿ ಸಂರಕ್ಷಿಸಬೇಕಿದೆ ಎಂದರು. ಕರ್ನಾಟಕದ ಪ್ರಾಚೀನ ಐತಿಹಾಸಿಕ ಸ್ಮಾರಕಗಳಿಗೆ ತನ್ನದೇ ಆದ ವೈಶಿಷ್ಟ್ಯತೆ ಇದ್ದು,ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಇಲ್ಲಿನ ಐತಿಹಾಸಿಕ ಸ್ಮಾರಕಗಳು ಸೇರಿರುವುದು ಕನ್ನಡ ನಾಡಿನ ಹೆಮ್ಮೆಯಾಗಿದೆ ಎಂದು ಬಣ್ಣಿಸಿದರು. ಮಾದಾಪುರ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಪಾಲಾಕ್ಷ, ಶಿಕ್ಷಣ ಸಂಯೋಜಕಿ ಎಸ್.ಬಿ.ಯಾದಕುಮಾರಿ, ಸಿ.ಆರ್ ಗಳಾದ ವಿ ಪ್ರೇಮ, ಡಿ.ಆರ್. ಗಿರೀಶ್, ಎಂ.ಎನ್.ಚೈತ್ರ, ಸಂಪನ್ಮೂಲ ಶಿಕ್ಷಕರಾದ ಡಿ.ವಿಜಯ್ ಕುಮಾರ್ , ಬಿಪಿನ್ ಕುಮಾರ್ ಹಾಗೂ ಆರ್. ದಿವಾಕರ್ ಇದ್ದರು. ವಿದ್ಯಾರ್ಥಿಗಳಿಗೆ ಪ್ರಾಚ್ಯ ಪ್ರಜ್ಞೆ ಕುರಿತು ಪ್ರಬಂಧ, ಭಾಷಣ, ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳ ವಿಷಯಗಳನ್ನು ಮುಂದೆ ಆವರಣದಲ್ಲಿ ಬರೆಯಲಾಗಿದೆ. :: ಪ್ರಬಂಧ ಸ್ಪರ್ಧೆ : : ಕರ್ನಾಟಕದ ಪ್ರಾಚೀನ ಸ್ಮಾರಕಗಳ ಉಳಿಸುವಿಕೆಯಲ್ಲಿ ಇರುವ ಸವಾಲುಗಳು ಮತ್ತು ಪರಿಹಾರಗಳು, :: ಭಾಷಣ ಸ್ಪರ್ಧೆ : : ಕರ್ನಾಟಕದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಮುದಾಯದ ಪಾತ್ರ, :: ಚಿತ್ರಕಲೆ ಸ್ಪರ್ಧೆ :: ಕರ್ನಾಟಕದ ಐತಿಹಾಸಿಕ ಸ್ಮಾರಕಗಳು ಹಾಗೂ :: ರಸಪ್ರಶ್ನೆ ಸ್ಪರ್ಧೆ :: ಕರ್ನಾಟಕದ ಪ್ರಾಚೀನ ಐತಿಹಾಸಿಕ ಸ್ಮಾರಕಗಳಿಗೆ ಸಂಬಂಧಪಟ್ಟ ವಿಷಯಗಳು ಕುರಿತು ಸ್ಪರ್ಧೆಗಳನ್ನು ನಡೆಸಲಾಯಿತು.











