
ಮಡಿಕೇರಿ NEWS DESK ನ.16 : ಕುಶಾಲನಗರ ಸಮೀಪದ ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅಂತರಾಷ್ಟ್ರೀಯ ಮಟ್ಟದ ಖೋಖೋ ಕ್ರೀಡಾಪಟು ಚೈತ್ರ ಬಿ. ಅವರು ತಮ್ಮ ಕ್ರೀಡಾಕ್ಷೇತ್ರದ ಯಶೋಗಾಥೆಯನ್ನು ವಿವರಿಸಿದರು. ಸಾಧನೆ ಮಾಡುವಾಗ ಎಡರುತೊಡರುಗಳು ಎದುರಾಗುವುದು ಸಹಜ, ಅವುಗಳನ್ನೆಲ್ಲ ಮೀರಿ ಗುರಿ ಸಾಧನೆಯ ಕಡೆಗೆ ಸಾಗಬೇಕು. ವಿದ್ಯಾರ್ಥಿಗಳಲ್ಲಿರುವ ಕ್ರೀಡಾಸಕ್ತಿಯನ್ನು ಶಿಕ್ಷಕರು ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಶಿಕ್ಷಣದ ಜೊತೆಗೆ ಕ್ರೀಡೆ ಕೂಡ ಜೀವನದಲ್ಲಿ ಬಹಳ ಮುಖ್ಯವಾಗಿದೆ ಎಂದರು. ಜ್ಞಾನಗಂಗಾ ವಸತಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಕೆ.ಸುಧೀರ್ ಅವರು ಮಾತನಾಡಿ ಆರೋಗ್ಯವೇ ಭಾಗ್ಯ, ಉತ್ತಮ ಆರೋಗ್ಯ ಮತ್ತು ದೈಹಿಕ ಸದೃಢತೆ ನಮ್ಮದಾಗಬೇಕಾದರೆ ಕ್ರೀಡೆ ಅತೀ ಅವಶ್ಯಕ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ದಿನಗಳಲ್ಲಿ ಮಕ್ಕಳು ಟಿವಿ ಮತ್ತು ಮೊಬೈಲ್ ಗಳಲ್ಲಿ ಬರುವ ಆಟಗಳನ್ನು ಹೆಚ್ಚೆಚ್ಚು ಆಡುತ್ತಾರೆ. ಇಂತಹ ಆಟಗಳನ್ನು ಆಡುವುದರಿಂದ ಮಕ್ಕಳ ಮಾನಸಿಕ ಆರೋಗ್ಯ ಕುಗ್ಗುತ್ತದೆ. ಮೈದಾನದಲ್ಲಿ ಆಡುವ ಕ್ರೀಡೆಗಳಿಂದ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮೈದಾನದ ಕ್ರೀಡೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಕರೆ ನೀಡಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎಸ್.ನಿಂಗಪ್ಪ ಅವರು ಮಾತನಾಡಿ ಮನುಷ್ಯನಿಗೆ ಉತ್ತಮ ಆರೋಗ್ಯ ಸಿಗಬೇಕಾದರೆ ಮನಸ್ಸಿಗೆ ಜ್ಞಾನ ಮತ್ತು ದೇಹಕ್ಕೆ ಕ್ರೀಡೆ ಅಗತ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಕ್ರೀಡೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಅನಂತ ಪದ್ಮನಾಭನ್, ಶೋಭಾ ಅನಂತ ಪದ್ಮನಾಭನ್, ಪ್ರಾಂಶುಪಾಲರಾದ ಸತ್ಯ ಸುಲೋಚನ ಎಸ್.ಎಂ, ಉಪ ಪ್ರಾಂಶುಪಾಲರಾದ ಸಿ.ಕೆ.ನಾಗರಾಜ್ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.








