ಮಡಿಕೇರಿ NEWS DESK ನ.16 : ಕಾಳು ಮೆಣಸು ಕಳ್ಳತನದ ಆರೋಪದಡಿ ಬಂಧಿತನಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿಯೊಬ್ಬ ತನ್ನ ಪತ್ನಿಗೆ ಲೈವ್ ವಿಡಿಯೋ ಮಾಡಿ ನೇಣಿಗೆ ಶರಣಾಗಿರುವ ಘಟನೆ ಮಡಿಕೇರಿ ತಾಲ್ಲೂಕಿನ ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ. ಕಿಬ್ಬೆಟ್ಟ ಗ್ರಾಮದ ಕೀರ್ತಿ (32) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಮಡಿಕೇರಿ ತಾಲ್ಲೂಕಿನ ಬೋಯಿಕೇರಿ ಸಮೀಪದ ತೋಟವೊಂದಕ್ಕೆ ಹೋದ ಕೀರ್ತಿ ಊರಿನಲ್ಲಿದ್ದ ಪತ್ನಿಗೆ ಲೈವ್ ವಿಡಿಯೋ ಮಾಡಿ ಮನೆಗೆ ಬರುವಂತೆ ಕರೆದಿದ್ದಾನೆ. ಆಕೆ ಬರಲು ಒಪ್ಪದೆ ಇದ್ದಾಗ ಮರದಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ. ಯಡವಾರೆ ಗ್ರಾಮದ ಕಾಫಿ ತೋಟದಲ್ಲಿ ನಡೆದಿದ್ದ ಕಾಳು ಮೆಣಸು ಕಳ್ಳತನ ಪ್ರಕರಣದ ಆರೋಪಿಯಾಗಿದ್ದ ಕೀರ್ತಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.










