ಗೋಣಿಕೊಪ್ಪ ನ.17 NEWS DESK : ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜಯಂತಿಯನ್ನು ತಿತಿಮತಿ ಸಮುದಾಯ ಭವನದಲ್ಲಿ ಆಚರಿಸಲಾಯಿತು. ಆದಿವಾಸಿಗಳು ಮರೂರು ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಮುಂಭಾಗದಿಂದ ತಿತಿಮತಿ ಶಾಲೆಯವರೆಗೆ ಮೆರವಣಿಗೆ ನಡೆಸಿ ಬಿರ್ಸಾಮುಂಡಾ ಜಯಂತಿಯ ಬಗ್ಗೆ ಜನರಿಗೆ ಅರಿವು ಮೂಡಿಸಿದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ವಿವಿಧ ಆದಿವಾಸಿ ಬುಡಕಟ್ಟು ಸಂಘಗಳ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಂತರ ಬುಡಕಟ್ಟು ಸಮುದಾಯದ ಸಂಸ್ಕøತಿಗಳನ್ನ ಅನಾವರಣಗೊಳಿಸಲಾಯಿತು. ಕಾರ್ಯಕ್ರಮವನ್ನು ವಿರಾಜಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿ ಅಧ್ಯಕ್ಷ ಜಾನ್ಸನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ತನ್ನ ಸಣ್ಣ ಪ್ರಾಯದಲ್ಲೇ ಬಿರ್ಸಾಮುಂಡಾ ಬ್ರಿಟಿಷರ ವಿರುದ್ಧ ಹೋರಾಡಿ ತನ್ನ ಸಮುದಾಯದ ಉಳಿವಿಗಾಗಿ ಶ್ರಮಿಸಿದ ಜೀವಿ. ಆತನ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಅಗತ್ಯತೆ ಇದೆ. ಬ್ರಿಟಿಷರ ಕ್ರೈಸ್ತ ಪಾದ್ರಿಗಳಾಗಿ ಬುಡಕಟ್ಟು ಸಮುದಾಯವನ್ನು ಮತಾಂತರ ಮಾಡುವ ಹುನ್ನಾರದ ವಿರುದ್ದ ಹೋರಾಡಿದ ವೀರ. ಆತನ ನಡೆ ನುಡಿಗಳು ಮತ್ತು ಸಾಹಸ ಧೈರ್ಯಗಳನ್ನು ಮೈಗೂಡಿಸಿಕೊಂಡು ಯುವ ಸಮುದಾಯ ಬದುಕುವ ಮಾರ್ಗವನ್ನ ಕಂಡುಕೊಳ್ಳಬೇಕು ಎಂದು ಹೇಳಿದರು. ಬಿರ್ಸಾಮುಂಡಾ ಅವರ ಸಾಹಸ ಕಥೆಗಳನ್ನು ತಿಳಿಸಿ ಕೊಡುವ ಹೊಣೆಗಾರಿಕೆ ಇಲಾಖೆ ಮತ್ತು ಸಂಘ ಸಂಸ್ಥೆಗಳಿಗೆ ಜವಾಬ್ದಾರಿಯಾಗಿದೆ. ಹೀಗಾಗಿ ಆತನ ಜೀವನ ಚರಿತ್ರೆ ಪಠ್ಯ ಪುಸ್ತಕಗಳಲ್ಲಿ ಅಳವಡಿಕೆಯಾಗಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಬಿರ್ಸಾಮುಂಡ ಅವರ ಪುತ್ಥಳಿ ಇರುವ ಕುರುಹುಗಳು ಇಲ್ಲ. ಅತಿ ಹೆಚ್ಚು ಆದಿವಾಸಿಗಳಿರುವ ತಿತಿಮತಿ ಭಾಗದಲ್ಲಿ ಅವರ ಪುತ್ಥಳಿ ನಿರ್ಮಾಣ ಮಾಡುವ ಮೂಲಕ ಬಿರ್ಸಾಮುಂಡಾ ಅವರಿಗೆ ನಮನ ಸಲ್ಲಿಸುವ ಕಾರ್ಯ ನಡೆಯಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಗ್ಯಾರಂಟಿ ಯೋಜನಾ ಅನುμÁ್ಠನ ಸಮಿತಿ ಉಪಾಧ್ಯಕ್ಷೆ ಪಿ.ಆರ್ ಪಂಕಜ ಮಾತನಾಡಿ, ನಮ್ಮ ನಾಯಕನ ಬಗ್ಗೆ ನಾವು ತಿಳಿದುಕೊಳ್ಳದೆ ಹೋದರೆ ಮುಂದೆ ಅದರ ಪರಿಣಾಮ ಅನಾಹುತಗಳಿಗೆ ಕಾರಣವಾಗಬಹುದು. ನಮ್ಮ ಹಕ್ಕುಗಳಿಗಾಗಿ ನಮ್ಮ ಸವಲತ್ತುಗಳಿಗಾಗಿ ಹೋರಾಡುವ ಮನೋಭಾವವನ್ನ ಬೆಳೆಸಿಕೊಳ್ಳಲು ಬಿರ್ಸಾಮುಂಡಾ ಅವರಂತಹ ಜೀವನದಾರಿತ ಕಥೆಗಳು ನಮಗೆ ದಾರಿದೀಪವಾಗಲಿವೆ. ಮಕ್ಕಳ ಶೈಕ್ಷಣಿಕ ಪ್ರಗತಿಯ ಕಡೆ ಗಮನ ಹರಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ನಾವು ಬೆರೆತುಕೊಳ್ಳಲು ಅನುಕೂಲವಾಗುತ್ತದೆ. ನಮ್ಮ ಸಂಸ್ಕೃತಿ ಪರಂಪರೆ ಪದ್ಧತಿಗಳನ್ನು ಬಿಟ್ಟು ಇತರ ವಿಚಾರಗಳನ್ನ ಅನುಸರಿಸುತ್ತಾ ಹೋದಾಗ ನಮ್ಮ ಸಮುದಾಯವು ಈ ಸಮಾಜದಿಂದ ಕರಗಿ ಹೋಗುವ ಅಪಾಯ ಎದುರಾಗುತ್ತದೆ. ಇಂದು ಬುಡಕಟ್ಟು ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಶಾಲೆಗಳತ್ತ ಕರೆತರುವ ಕಾರ್ಯಕ್ಕೆ ಇಲಾಖೆಗಳು ಗಮನ ಹರಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಸಮನ್ವಯ ಅಧಿಕಾರಿ ಹೊನ್ನೇಗೌಡ ಎಸ್ ಮಾತನಾಡಿ, ಆದಿವಾಸಿಗಳ ಶೈಕ್ಷಣಿಕ ಪ್ರಗತಿಗೆ ಇಲಾಖೆ ಕ್ರಮ ಕೈಗೊಂಡಿದೆ. ಅದರಂತೆ ಸಮುದಾಯದ ಬೆಳವಣಿಗೆಗೆ ಪೂರಕವಾಗಿ ಭವನಗಳ ನಿರ್ಮಾಣಗಳ ಯೋಜನೆಗಳನ್ನ ರೂಪಿಸಲಾಗಿದೆ. ತಿತಿಮತಿಯಲ್ಲಿ ಜಾಗ ಗುರುತಿಸಲಾಗಿದ್ದು, ಬಿರ್ಸಾಮುಂಡಾ ಆದಿವಾಸಿ ಭವನ ನಿರ್ಮಾಣವಾಗುವ ಕನಸು ನನಸಾಗಲಿದೆ ಎಂದು ಮಾಹಿತಿ ನೀಡಿದರು. ಜೊತೆಗೆ ಮಡಿಕೇರಿಯಲ್ಲಿಯೂ ಕಾದಿರಿಸಿರುವ ಜಾಗದಲ್ಲಿ ನೆರವೇರಲಿದೆ ಎಂದು ಎಂದು ತಿಳಿಸಿದರು. ಈ ಸಂದರ್ಭ ಮಣಿ ಕುಂಞ, ಜೆ.ಕೆ.ತಿಮ್ಮ, ಪಿ.ಎಸ್.ಮುತ್ತಾ, ವೈ.ಎಂ.ಕಾಳ, ದಿನೇಶ್, ಪಿ.ಟಿ. ರಾಜು, ಸುಬ್ರು, ಪಿ.ಜೆ.ಮಣಿ, ರಾಮಕೃಷ್ಣ, ರಮೇಶ್, ಜೆ.ಕೆ.ತಿಮ್ಮ, ಪಿ.ಕೆ. ಚಂದಾ, ಸರೋಜ, ಶಾಂತಿ, ಪಿ.ಆರ್. ಪಂಕಜ, ಜೆ.ಎಂ. ಸೋಮಯ್ಯ, ಪಿ.ಎಸ್. ಶಾಂತ, ಗೌರಿ, ಪಿ.ಎಸ್. ಕರ್ಪ, ಜೆ.ಕೆ. ರಾಜು, ರಾಜೇಂದ್ರ ಪಿ.ಎಸ್., ರಾಣಿ, ಪ್ರತಿಮ, ಮಂಜುಳ, ದಿವ್ಯ ಪಿ.ಎಸ್, ಲಕ್ಷ್ಮಿ, ಸಂದೇಶ, ಜೆ.ಕೆ ಮುತ್ತಮ್ಮ, ಬಿ.ಕೆ. ಮಣಿ ಇವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತೇಜರಾಜ ಬಿ. ಅಲಸಬಾಳ ಮತ್ತು ಪ್ರಶಾಂತ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು, ಬುಡಕಟ್ಟು ಸಮುದಾಯದವರು ಇದ್ದರು.










