
ಕುಶಾಲನಗರ ನ.17 NEWS DESK : ಸೈನಿಕ ಶಾಲೆ ಕೊಡಗಿನಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ “ನಾಳಿನ ರಕ್ಷಕರು – ಶಾಶ್ವತ ಭವಿಷ್ಯಕ್ಕಾಗಿ ಯುವ ಮನಸ್ಸುಗಳ ಪೋಷಣೆ” ಎಂಬ ಪ್ರೇರಣಾ ವಾಕ್ಯದಡಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ -ಬೋಧಕೇತರ ವರ್ಗ, ಶಾಲೆಯ ಅಧಿಕಾರಿ ವೃಂದ ಹಾಗೂ ಕುಟುಂಬ ಸದಸ್ಯರು ಒಂದೇ ವೇದಿಕೆಯಲ್ಲಿ ಸೇರಿ ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸುವುದರೊಂದಿಗೆ, ಜವಾಬ್ದಾರಿಯುತ, ಭವಿಷ್ಯೋನ್ಮುಖ ನಾಗರೀಕರನ್ನು ರೂಪಿಸುವ ಶಾಲೆಯ ದೃಷ್ಟಿಕೋನವನ್ನು ಮತ್ತೊಮ್ಮೆ ಸಾಭೀತುಪಡಿಸಿದರು.
ಕಾರ್ಯಕ್ರಮವನ್ನು ಶಾಲೆಯ ಕಿರಿಯ ವಿದ್ಯಾರ್ಥಿಗಳಾದ 6ನೇ ತರಗತಿಯ ಕೆಡೆಟ್ ಅನ್ವಿತಾ ಮತ್ತು ಕೆಡೆಟ್ ಪುನೀತ್ ಉದ್ಘಾಟಿಸಿದರು. ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಮಾತನಾಡಿ, ವಿದ್ಯಾರ್ಥಿಗಳು “ಭವಿಷ್ಯದ ರಕ್ಷಕರು” ಎಂದು ನೆನಪಿಸಿದರು. ಶಿಕ್ಷಕರು ಅವರ ಜೀವನಯಾತ್ರೆಯಲ್ಲಿ ಅಲ್ಕೆಮಿಸ್ಟ್ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಾರೆ ಎಂದರು. ಕೃತಜ್ಞತೆ, ಮಾರ್ಗದರ್ಶನ ಮತ್ತು ಸಮತೋಲನ ಎಂಬ ತತ್ವಗಳನ್ನು ಅಳವಡಿಸಿಕೊಂಡು ಅರ್ಥಪೂರ್ಣ, ಶಾಶ್ವತ ಮತ್ತು ಯಶಸ್ವಿಯಾದ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿ ಕ್ಯಾಪ್ಟನ್ ಕೆಡೆಟ್ ಹೃದಯ್ ಮಾತನಾಡಿ ಕೃತಜ್ಞತೆಯನ್ನು ವ್ಯಕ್ತಪಡಿಸಿ, ಮಕ್ಕಳ ದಿನಾಚರಣೆಯನ್ನು ಅದ್ಭುತವಾಗಿ, ಸೌಹಾರ್ದಯುತವಾಗಿ ಹಾಗೂ ಸೃಜನಾತ್ಮಕವಾಗಿ ಆಯೋಜಿಸಿದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಧನ್ಯವಾದ ತಿಳಿಸಿದರು. ಜಾಕೀರ್ ಹುಸೇನ್ ವಂದಿಸಿದರು. ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಉಪಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಶಾಲೆಯ ಪ್ರಥಮ ಮಹಿಳೆ ದಿವ್ಯ ಸಿಂಗ್, ಶಾಲಿನಿ ರಾವ್ ಹಾಗೂ ಹಿರಿಯ ಶಿಕ್ಷಕ ವಿಬಿನ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿ ವರ್ಗದಿಂದ ಮನರಂಜನೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು. ದಿನದ ವಿಶೇಷ ಆಕರ್ಷಣೆಯಾಗಿ ಶಿಕ್ಷಕರು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ನಂತರ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆದ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಆವರಣದಲ್ಲಿ ಸಿದ್ಧಪಡಿಸಿದ ಆಹಾರ ಮಳಿಗೆಗಳು ಶಾಲೆಯ ತುಂಬಾ ಹಬ್ಬದ ವಾತಾವರಣವನ್ನು ಸೃಷ್ಠಿಸಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿಶ್ರಾಂತಿ, ವಿನೋದ ಮತ್ತು ಪರಸ್ಪರ ಸಂವಾದಕ್ಕೆ ಅವಕಾಶ ನೀಡಲಾಯಿತು. ವಿದ್ಯಾರ್ಥಿಗಳ, ಸಿಬ್ಬಂದಿ ವರ್ಗದವರ ಮತ್ತು ಕುಟುಂಬಗಳ ಉತ್ಸಾಹಭರಿತ ಹಾಜರಾತಿಯಿಂದ ಸೈನಿಕ ಶಾಲೆ ಕೊಡಗಿನಲ್ಲಿ ನಡೆದ ಮಕ್ಕಳ ದಿನಾಚರಣೆಯು ಸ್ಫೂರ್ತಿದಾಯಕ, ಉಲ್ಲಾಸಭರಿತ ಮತ್ತು ಮನಮೋಹಕವಾಗಿ ನೆರವೇರಿತು.









