ಮಡಿಕೇರಿ ನ.17 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಕಾನುನು ಸೇವ ಪ್ರಾಧಿಕಾರ, ಶಿಶು ಅಭಿವೃದ್ದಿ ಯೋಜನೆ ಹಾಗೂ ಮಡಿಕೇರಿ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ವಾತ್ಸಲ್ಯ ಶಿಶು ಪಾಲನಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭಾ ಅವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ನ್ಯಾಯಾಧೀಶರು, ಮಕ್ಕಳ ಬಗ್ಗೆ ಪೋಷಕರಿಗೆ ಕಾಳಜಿ ಅಗತ್ಯ, ಇಂದು ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗುತ್ತಿದ್ದಾರೆ. ಮೊಬೈಲ್‌ನಿಂದ ದೂರವಿರುವಂತೆ ಪೋಷಕರು ಎಚ್ಚರ ವಹಿಸಿಬೇಕು. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಡುವುದು ಮುಖ್ಯವಾಗಿದೆ. ಶಿಶುಪಾಲನ ಕೇಂದ್ರದ ಸಿಬ್ಬಂದಿಗಳು ಇಲ್ಲಿನ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ ಅದು ಶ್ಲಾಘನೀಯ ಎಂದರು. ಮಕ್ಕಳ ರಕ್ಷಣಾಧಿಕಾರಿ ಸಚಿನ್ ಸುವರ್ಣ ಮಾತನಾಡಿ, ಮಕ್ಕಳಿಲ್ಲದ ದಂಪತಿಗಳು ಕಾನೂನಾತ್ಮಕವಾಗಿ ಮಗುವನ್ನು ದತ್ತು ಪಡೆಯುವ ಅಧಿಕಾರವಿದೆ. ಒಂದು ವೇಳೆ, ಕಾನೂನು ಬಾಹಿರವಾಗಿ ಮಕ್ಕಳನ್ನು ಬೇರೆ ಪೋಷಕರಿಗೆ ನೀಡಿದರೆ ಅಂತಹವರ ವಿರುದ್ದ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಮಕ್ಕಳ ಪೊಲೀಸ್ ಘಟಕದ ಅಧಿಕಾರಿ ಸುಮತಿ ಮಾತನಾಡಿ ಮಕ್ಕಳನ್ನು ಸಲಹುವುದು ಪೋಷಕರ ಕರ್ತವ್ಯವೋ, ಅಂತೆಯೇ ಮಕ್ಕಳನ್ನು ರಕ್ಷಿಸುವ ಹೊಣೆ ಸರಕಾರದ್ದು, ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದವರನ್ನು ಪೋಕ್ಸೋ ಕಾಯ್ದೆಯಡಿ ಶಿಕ್ಷಿಸಲಾಗುವುದು ಎಂದು ತಿಳಿಸಿದರು. ಪತ್ರಕರ್ತ ಪ್ರಶಾಂತ್.ಟಿ.ಆರ್ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹಾಗಾಗಿ ಮಕ್ಕಳನ್ನು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ರೂಪಿಸುವ ಜವಾಬ್ದಾರಿ ಎಲ್ಲರದ್ದೂ, ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿರಿಸಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಲು ಪ್ರೋತ್ಸಾಹಿಸಬೇಕು. ಮಕ್ಕನ್ನು ವಿಶ್ವಮಾರ‍್ನಾಗಿ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ಸ್ತ್ರಿ ಶಕ್ತಿ ಒಕ್ಕೂಟ ರಾಜ್ಯಾಧ್ಯಕ್ಷೆ ರೆಹಾನಾ ಸುಲ್ತಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ದಿನಾಚರಣೆಯ ಪ್ರಯುಕ್ತ, ಶಿಶುಪಾಲನಾ ಕೇಂದ್ರದ ಪುಟಾಣಿಗಳಿಂದ ಛದ್ಮವೇಷ ಪ್ರದರ್ಶನ ಹಾಗೂ ನೃತ್ಯ ಪ್ರದರ್ಶನ ಸರ್ವರ ಗಮನ ಸೆಳೆಯಿತು. ಇದೇ ಸಂದರ್ಭ ಶಿಶುಪಾಲನ ಕೇಂದ್ರದ ಶಿಕ್ಷಕಿ ಹಾಗೂ ಸಿಬ್ಬಂದಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡಾಕೂಡದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಮಾಜಸೇವಕರು ಹಾಗೂ ಪತ್ರಕರ್ತ ಫಿರೋಜ್ ಖಾನ್, ಜಿಲ್ಲಾ ಶಿಶುಪಾಲನ ಕೇಂದ್ರದ ಕಾರ್ಯದರ್ಶಿ ತಾರಮಣಿ, ಸೋಮವಾರಪೇಟೆ ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಹೇಮಾ, ಮಡಿಕೇರಿ ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಉಪಾಧ್ಯಕ್ಷೆ ಗೀತಾ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ನಿರ್ದೇಶಕಿ ಶಾಂತಿ, ಕಾನೂನು ಸ್ವಯಂ ಸೇವಕಿ ಯಾನಿ ಫಾತೀಮಾ ಹಾಗೂ ಪೋಷಕರು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.











