
ಸೋಮವಾರಪೇಟೆ ನ.17 NEWS DESK : ದೆಹಲಿಯಲ್ಲಿ ಬಾಂಬ್ ಸ್ಪೋಟಿಸಿ ಅಮಾಯಕರ ಸಾವಿಗೆ ಕಾರಣರಾದ ಭಯೋತ್ಪಾದಕರ ನಡೆಯನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ್ ಬೋಜೇಗೌಡ ಅವರು, ದೇಶದೊಳಗಿನ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದರೊಂದಿಗೆ ಭವಿಷ್ಯದಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದರು. ಭಯೋತ್ಪಾದಕ ಕೃತ್ಯಗಳು ನಡೆದಾಗ ಅದನ್ನು ಸಂಭ್ರಮಿಸುವ ಪಾಕಿಸ್ತಾನಿ ಪ್ರೇರಿತ ಮೂಲಭೂತವಾದಿ ಭಯೋತ್ಪಾದಕರು ದೇಶದೊಳಗೂ ಇದ್ದಾರೆ. ಇವರುಗಳನ್ನು ಮಟ್ಟ ಹಾಕುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕಿದೆ. ಇಲಾಖೆಯೊಂದಿಗೆ ಪ್ರಜ್ಞಾವಂತ ಸಮಾಜ ಕೈಜೋಡಿಸಬೇಕಿದೆ ಎಂದರು. ದೆಹಲಿ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ ಅಮಾಯಕರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಘಟಕದ ಸುಭಾಷ್ ತಿಮ್ಮಯ್ಯ, ತಾಲೂಕು ಸಂಯೋಜಕ್ ಎಂ.ಬಿ. ಉಮೇಶ್, ಪ್ರಚಾರ ಪ್ರಮುಖ್ ಹೇಮಂತ್ ಪೂಜಾರಿ, ವಿನು ಮಾದಾಪುರ, ದೀಪಕ್, ರತನ್ ಮಳ್ತೆ, ನಿಲಯ್ ಗೌಡ, ದಿಲೀಪ್, ಪ್ರಮುಖರಾದ ಬಿ.ಜೆ.ದೀಪಕ್, ಗೌತಮ್ ಗೌಡ, ಮಹೇಶ್ ತಿಮ್ಮಯ್ಯ, ಸೇರಿದಂತೆ ಇತರರು ಇದ್ದರು.








