
ಮಡಿಕೇರಿ ನ.16 NEWS DESK : ಮುಲ್ಲೇಂಗಡ ಕೊಡವ ಕುಟುಂಬದ ವತಿಯಿಂದ ಇದೇ ಪ್ರಥಮ ಬಾರಿಗೆ ಕೊಡವ ಕುಟುಂಬಗಳ ನಡುವಣ ‘ಕಬಡ್ಡಿ ನಮ್ಮೆ-2026’, ದಕ್ಷಿಣ ಕೊಡಗಿನ ಕಂಡಂಗಾಲ ಗ್ರಾಮದಲ್ಲಿ ಮುಂದಿನ ಸಾಲಿನ ಏ.2ರಿಂದ 4ರವರೆಗೆ ನಡೆಯಲಿದೆಯೆಂದು ಪಂದ್ಯಾವಳಿ ಆಯೋಜನಾ ಸಮಿತಿ ಸಂಚಾಲಕರಾದ ಮುಲ್ಲೇಂಗಡ ಮದೋಷ್ ಪೂವಯ್ಯ ತಿಳಿಸಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೊಡವ ಕುಟುಂಬಗಳ ನಡುವೆ ಆರಂಭಿಕವಾಗಿ ಹಾಕಿ ಪಂದ್ಯಾವಳಿ ಆರಂಭವಾದ ಬಳಿಕ, ಕ್ರಿಕೆಟ್, ಹಗ್ಗಜಗ್ಗಾಟ, ಬೊಡಿ ನಮ್ಮೆ ಆರಂಭಗೊಂಡಿತು. ಇದೀಗ ಮೊದಲ ಪ್ರಯತ್ನವಾಗಿ ಕೊಡವ ಕುಟುಂಬಗಳ ನಡುವಿನ ಕಬಡ್ಡಿ ಪಂದ್ಯಾವಳಿಯನ್ನು ಕಂಡಂಗಾಲದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗುತ್ತಿದೆಯೆಂದು ಮಾಹಿತಿ ನೀಡಿದರು. 50 ತಂಡಗಳ ನಿರೀಕ್ಷೆ :: ಕೊಡವ ಕುಟುಂಬಗಳ ನಡುವಣ ಕಬಡ್ಡಿ ಪಂದ್ಯಾವಳಿಯಲ್ಲಿ ಸುಮಾರು 50 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಂದ್ಯಾವಳಿ ‘ಮ್ಯಾಟ್’ನ್ನು ಬಳಸಲಾಗುತ್ತದೆ ಮತ್ತು ಪಂದ್ಯಗಳನ್ನು ನೋಂದಾಯಿತ ಕಬಡ್ಡಿ ತೀರ್ಪುಗಾರರು ನಡೆಸಿಕೊಡಲಿದ್ದಾರೆಂದು ಸ್ಪಷ್ಟಪಡಿಸಿದರು. ಕೊಡವ ಕುಟುಂಬದ ಕಬಡ್ಡಿ ಪಂದ್ಯಾವಳಿಯ ಪ್ರತಿ ತಂಡದಲ್ಲಿ 7+3 ಆಟಗಾರರು ಪಾಲ್ಗೊಳ್ಳಲು ಅವಕಾಶವನ್ನು ಒದಗಿಸಲಾಗುತ್ತಿದೆ. ಪಂದ್ಯಾವಳಿ ವಿಜೇತ ತಂಡಕ್ಕೆ 30 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 20 ಸಾವಿರ ರೂ. ಮತ್ತು ಆಕರ್ಷಕ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆಂದು ವಿವರಗಳನ್ನು ನೀಡಿದರು. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ತಂಡಗಳು ಮುಂದಿನ ಸಾಲಿನ ಮಾ.10ರ ಒಳಗಾಗಿ 1 ಸಾವಿರ ರೂ. ಪ್ರವೇಶ ಶುಲ್ಕದೊಂದಿಗೆ ‘ಮುಲ್ಲೇಂಗಡ ಮದೋಷ್ ಪೂವಯ್ಯ, ಸಂಚಾಲಕರು, ಮುಲ್ಲೇಂಗಡ ಕಬಡ್ಡಿ ನಮ್ಮೆ-2026’ ಇವರ ಬಳಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಸಂಪರ್ಕ ಸಂಖ್ಯೆ ಮೊ.9480556667. ಗೋಷ್ಠಿಯಲ್ಲಿ ಮುಲ್ಲೇಂಗಡ ಕುಟುಂಬದ ಅಧ್ಯಕ್ಷರಾದ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಪಂದ್ಯಾವಳಿ ಆಯೋಜಕ ಸಮಿತಿಯ ಕಾರ್ಯದರ್ಶಿ ಮುಲ್ಲೇಂಗಡ ಕಿಟ್ಟು ಕುಟ್ಟಪ್ಪ, ನಿರ್ದೇಶಕರಾದ ಮುಲ್ಲೇಂಗಡ ರಘ ದೇವಯ್ಯ ಮತ್ತು ಮುಲ್ಲೇಂಗಡ ಸುರೇಶ್ ಭೀಮಯ್ಯ ಉಪಸ್ಥಿತರಿದ್ದರು.









