
ಮಡಿಕೇರಿ ನ.17 NEWS DESK : ಬಿಹಾರ ಚುನಾವಣಾ ಹಂತದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ನೀಡಿದ ಹೇಳಿಕೆಗೆ ವಿರುದ್ಧವಾಗಿ, ಅವರನ್ನು ಮತ್ತು ಅವರ ಕಟುಂಬದವರನ್ನು ಸಾಮಾಜಿಕ ಜಾಲ ತಾಣದಲ್ಲಿ ಅತ್ಯಂತ ಅವಹೇಳನಕಾರಿಯಾಗಿ ನಿಂದಿಸಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಹಂಸ ಕೋಡಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಜನಾನುರಾಗಿಯಾಗಿರುವ ಶಾಸಕರನ್ನು ಮುಂದಿನ ದಿನಗಳಲ್ಲಿ ಅವಹೇಳನಕಾರಿಯಾಗಿ ನಿಂದಿಸುವ ಘಟನೆ ಮುಂದುವರಿದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಅವರು ನೀಡಿದರು. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗೌರೀಶ್ ರೈ ಮಾತನಾಡಿ, ಎಲ್ಲಾ ಸಮುದಾಯವರನ್ನು ಸಮಾನವಾಗಿ ಕಾಣುವ ಮೂಲಕ, ಅವರ ಬೇಡಿಕೆಗಳಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸುತ್ತಿರುವ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಅತ್ಯಂತ ಕೀಳು ಮಟ್ಟದ ಭಾಷೆಯನ್ನು ಬಳಿಸಿ ನಿಂದಿಸಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪರವಂಡ ಸಿರಾಜ್ ಮಾತನಾಡಿ, ಶಾಸಕರನ್ನು ಸಾಮಾಜಿಕ ಜಾಲ ತಾಣದಲ್ಲಿ ನಿಂದಿಸುವ ಘಟನೆಗೆ ಸಂಬಂಧಿಸಿದಂತೆ ಈಗಾಗಲೆ ಮಡಿಕೇರಿ, ವಿರಾಜಪೇಟೆ, ನಾಪೋಕ್ಲು, ಭಾಗಮಂಡಲಗಳಲ್ಲಿ ಯುವ ಕಾಂಗ್ರೆಸ್ ಮತ್ತು ಪಕ್ಷದ ಸಾಮಾಜಿಕ ಜಾಲತಾಣ ಘಟಕದಿಂದ ದೂರನ್ನು ದಾಖಲಿಸಲಾಗಿದೆ. ಅಂತೆಯೇ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದೆ ಯಾವುದೇ ಕಾರಣಕ್ಕೂ ಶಾಸಕರನ್ನು ನಿಂದಿಸುವ ಪ್ರಯತ್ನ ನಡೆದಲ್ಲಿ ಹೋರಾಟಕ್ಕೆ ಇಳಿಯವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಾಪೋಕ್ಲು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶೋರ್ ಬಲ್ಲಡ್ಕ ಉಪಸ್ಥಿತರಿದ್ದರು.









