
ಮಡಿಕೇರಿ ನ.17 NEWS DESK : ಶತ ಶತಮಾನಗಳಿಂದ ತಾರತಮ್ಯ, ದೌರ್ಜನ್ಯಕ್ಕೆ ಒಳಗಾಗಿ, ಅಭಿವೃದ್ಧಿಯನ್ನೇ ಕಾಣದಿರುವ ಸಮುದಾಯಗಳಿಗೆ ಇರುವ ಎಸ್‍ಸಿ ಮತ್ತು ಎಸ್‍ಟಿ ಪಟ್ಟಿಯಲ್ಲಿ ಬಲಾಢ್ಯ ಸಮುದಾಯಗಳು ಸೇರ್ಪಡೆಗೊಳ್ಳಲು ಮುಂದಾಗುತ್ತಿರುವ ಪ್ರಯತ್ನಗಳು ಅವೈಜ್ಞಾನಿಕ ಮತ್ತು ಅಸಂಬದ್ಧವೆಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಡಾ.ಎಸ್.ವೈ.ಗುರುಶಾಂತ್ ಅಭಿಪ್ರಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕುರುಬ ಮತ್ತು ಕೊಡವ ಸಮುದಾಯದ ಕೆಲವರು ತಮ್ಮ ಸಮುದಾಯವನ್ನು ಎಸ್‍ಟಿ ಪಟ್ಟಿಗೆ ಸೇರ್ಪಡೆಮಾಡುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಇದರಲ್ಲಿ ಕೊಡವ ಸಮುದಾಯವನ್ನು ಎಸ್‍ಟಿ ಪಟ್ಟಿಯೊಂದಿಗೆ ಭೌಗೋಳಿಕ ರಾಜಕೀಯ ಸ್ಥಾನಮಾನವನ್ನು ಮತ್ತು ಸ್ವಾಯತ್ತತೆಯನ್ನು ಕಲ್ಪಿಸಲು ಆಯೋಗ ರಚಿಸುವಂತೆ ಸಿಎನ್‍ಸಿ ಸಂಘಟನೆ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಮನವಿಯನ್ನು ಸಲ್ಲಿಸಿದೆಯೆಂದು ಮಾಹಿತಿ ನೀಡಿದರು. ಕೊಡವ ಸಮುದಾಯದ ಈ ಕೋರಿಕೆಯ ಬಗ್ಗೆ ಕೊಡಗಿನ ದಲಿತ, ಆದಿವಾಸಿ ಸಂಘಟನೆಗಳು ಹಾಗೂ ಕೊಡವ ಭಾಷಿಕ ಸಮುದಾಯಗಳು ತಮ್ಮ ಸ್ಪಷ್ಟ ವಿರೋಧವನ್ನು ವ್ಯಕ್ತಪಡಿಸಿವೆ ಮಾತ್ರವಲ್ಲ, ಈ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಆಕ್ಷೇಪವನ್ನು ವ್ಯಕ್ತಪಡಿಸಿರುವುದಾಗಿ ಸ್ಪಷ್ಟಪಡಿಸಿದರು. ಎಸ್‍ಸಿ ಮತ್ತು ಎಸ್‍ಟಿ ಪಟ್ಟಿಗೆ ಸೇರುವುದು ಎಂದರೆ ಅದು ಒಂದು ಯೋಜನೆಯಲ್ಲ ಅಥವಾ ಸೌಲಭ್ಯವಲ್ಲ. ಅದು ದಮನಿತ ಸಮುದಾಯಗಳ ಪ್ರಗತಿಗೆ ಇರುವ ಸಂವಿಧಾನ ಬದ್ಧ ಮೂಲಭೂತ ಹಕ್ಕು ಮತ್ತು ಅವಶ್ಯಕತೆಯಾಗಿದೆಯೆಂದು ಗುರುಶಾಂತ್ ತಿಳಿಸಿ, ಎಸ್‍ಸಿ, ಎಸ್‍ಟಿ ಪಟ್ಟಿಗೆ ಸೇರಿಸಲು ಅದರದ್ದೇ ಆದ ಮಾನದಂಡಗಳಿವೆ. ಈ ಹಿನ್ನೆಲೆಯಲ್ಲಿ ನಮ್ಮ ಹೋರಾಟವನನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದರು. :: ಎಲ್ಲ ಕೊಡವರು ಕೇಳುತ್ತಿಲ್ಲ :: ಕೊಡವ ಸಮುದಾಯವನ್ನು ಎಸ್‍ಟಿ ಪಟ್ಟಿಗೆ ಸೇರಿಸಬೇಕೆನ್ನುವ ಬೇಡಿಕೆಯನ್ನು ಎಲ್ಲಾ ಕೊಡವ ಸಮುದಾಯದವರು ವ್ಯಕ್ತಪಡಿಸುತ್ತಿಲ್ಲ. ಬದಲಾಗಿ ಕೆಲ ಸಂಘಟನೆಗಳು ಮಾತ್ರ ಕೇಳುತ್ತಿವೆ. ವಿಷಯಯಕ್ಕೆ ಸಂಬಂಧಿಸಿದಂತೆ ಗೌರವಾನ್ವಿತ ನ್ಯಾಯಾಲಯದ ಆದೇಶ, ಸೂಚನೆಗಳನ್ನು ತಾವು ಗೌರವಿಸುವುದಾಗಿ ಹೇಳಿದರು. ಮಾನವೀಯ ಅಂತಃಕರಣದಿಂದ ನೋಡಿ :: ಐತಿಹಾಸಿಕವಾದ ತಾರತಮ್ಯ ದಬ್ಬಾಳಿಕೆಗಳಿಗೆ ಒಳಗಾಗುತ್ತಿರುವ ಆದಿವಾಸಿ ಸಮೂಹವನ್ನು, ಬಲಾಢ್ಯ ಸಮೂಹಗಳು ಅಂತಃಕರಣದಿಂದ ನೋಡಬೇಕೆಂದು ಮನವಿ ಮಾಡಿದ ಅವರು, ಎಸ್‍ಟಿ ಸ್ಥಾನಮಾನ ಕೇಳುವ ಕೊಡವ ಸಮುದಾಯದಲ್ಲಿ ಸಮಸ್ಯೆಗಳೇ ಇಲ್ಲ ಎನ್ನುತ್ತಿಲ್ಲ. ಆದರೆ, ಅವರಲ್ಲಿ ಇರುವ ಸಮಸ್ಯೆಗಳ ಪರಿಹಾರಕ್ಕೆ ಎಸ್‍ಟಿ ಪಟ್ಟಿಗೆ ಸೇರಬೇಕೆನ್ನುವ ನಿಲುವು ಸಮರ್ಥನೀಯವಲ್ಲವೆಂದು ದೃಢವಾಗಿ ನುಡಿದರು. ಆದಿವಾಸಿ ಸಮಸ್ಯೆಗಳ ಪರಿಹಾರಕ್ಕೆ ಸಭೆ ನಡೆಯಲಿ :: ಆದಿವಾಸಿಗಳು ಮತ್ತು ದಲಿತ ಸಮುದಾಯಗಳು ಎದುರಿಸತ್ತಿರುವ ಭೂಮಿಯ ಹಕ್ಕು, ವಸತಿ, ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸುವ ಸಮಸ್ಯೆಗಳ ಪರಿಹಾರಕ್ಕೆ ಸಮಾಜ ಕಲ್ಯಾಣ ಇಲಾಖಾ ಸಚಿವ ಹೆಚ್.ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಆ ಸಂದರ್ಭ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಸ್ಯೆ ಬಗೆಹರಿಕೆಗೆ ಸಭೆ ನಡೆಸಲು ನಿರ್ದೇಶನ ನೀಡಿದ್ದರು. ಅದರಂತೆ ಶೀಘ್ರವೇ ಸಭೆ ನಡೆಯಲೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ನಾಗರಹೊಳೆ ಆದಿವಾಸಿ ಜಮ್ಮಾ ಪಾಳೆ ಹಕ್ಕು ಸ್ಥಾಪನಾ ಸಮಿತಿ ಸಂಚಾಲಕರಾದ ಜೆ.ಎ.ಶಿವು, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಜೆ.ಆರ್. ಪ್ರೇಮ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೃಷ್ಣಪ್ಪ, ಕಾರ್ಯಕರ್ತ ಪೂವಣ್ಣಿ ಉಪಸ್ಥಿತರಿದ್ದರು.









