ವಿರಾಜಪೇಟೆ ನ.18 NEWS DESK : ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯು ವಿದ್ಯಾಸಂಸ್ಥೆಯೊಂದರ ಬೆಳವಣಿಗೆಗೆ ಪೂರಕವಾಗಿದೆ ಎಂದು ವಿರಾಜಪೇಟೆಯ ಸರ್ಕಾರಿ ಪಿ ಯು ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಚಿಲ್ಲವಂಡ ಕಾವೇರಪ್ಪ ಅಭಿಪ್ರಾಯಪಟ್ಟರು. ಕಾಲೇಜಿನಲ್ಲಿ ನಡೆದ ಪೋಷಕರ ಸಭೆ 2025-26 ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಸಾಧನೆಯನ್ನು ಮಾಡಬೇಕು. ಶಿಸ್ತನ್ನು ಮೈಗೂಡಿಸಿಕೊಳ್ಳುವುದರ ಮೂಲಕ ವಿದ್ಯಾಸಂಸ್ಥೆ ಗೂ ಪೋಷಕರಿಗೂ ಕೀರ್ತಿಯನ್ನು ತರಬೇಕು. ಶೈಕ್ಷಣಿಕ ಪ್ರಗತಿಯಿಂದ ಸಂಸ್ಥೆಯ ಬೆಳವಣಿಗೆ ಆಗಲು ಸಾಧ್ಯ ಎಂದರು. ಪೋಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಗಮನಿಸುತ್ತಿರಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ಮಾತನಾಡಿ, ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಪೋಷಕರು ಆಗಿಂದಾಗೆ ವಿದ್ಯಾರ್ಥಿಗಳ ಪ್ರಗತಿಯನ್ನು ಪರಿಶೀಲಿಸಬೇಕು. ಮೊಬೈಲ್ ಗೀಳಿಗೆ ಮಕ್ಕಳು ಒಳಗಾಗದಂತೆ ಪೋಷಕರು ಎಚ್ಚರವಹಿಸಬೇಕು ಎಂದು ಹೇಳಿದರು. ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಅವರ ಪೋಷಕರುಗಳನ್ನು ಅಭಿನಂದಿಸಿದ ಅವರು, ನೂತನ ಪ್ರಶ್ನೆ ಪತ್ರಿಕೆ ನೀಲಿ ನಕಾಶೆ ಹಾಗೂ ಪ್ರಾಯೋಗಿಕ ಪರೀಕ್ಷಾ ವಿಧಾನಗಳ ಬಗ್ಗೆ ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಸುಮಯ ವಿದ್ಯಾರ್ಥಿ ವೇತನ ಹಾಗೂ ಇ ಬಯೋ ಮೆಟ್ರಿಕ್ ವ್ಯವಸ್ಥೆ ಮಾಡಿಸುವ ವಿಧಾನದ ಬಗ್ಗೆ ತಿಳಿಸಿದರು. ಈ ಸಂದರ್ಭ ಪೋಷಕರು ಹಾಗೂ ಉಪನ್ಯಾಸಕರ ನಡುವೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಕುರಿತು ಸಂವಾದ ನಡೆಯಿತು. ಉಪನ್ಯಾಸಕ ರೈಮಂಡ್ ಸ್ವಾಗತಿಸಿದರು. ಉಪನ್ಯಾಸಕಿ ಸುಮಲತಾ ನಿರೂಪಿಸಿದರು. ಉಪನ್ಯಾಸಕಿ ದಮಯಂತಿ ವಂದಿಸಿದರು. ಉಪನ್ಯಾಸಕರಾದ ಕಾಂತಿ, ಪವಿತ್ರ ಕುಮಾರಿ, ತಿಮ್ಮಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಪನ್ಯಾಸಕರು, ಪೋಷಕರು ಉಪಸ್ಥಿತರಿದ್ದರು.











