ನಾಪೋಕ್ಲು ನ.19 NEWS DESK : ಕುಂಜಿಲ ಗ್ರಾಮದ ಆಕ್ಸ್‌ಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಕ್ಕಬೆ ಕ್ಲಸ್ಟರ್ ನ 2025-26ನೇ ಸಾಲಿನ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ವ್ಯವಸ್ಥಾಪಕ ಶಾಹಿದ್ ಅಲಿ, ಪ್ರತಿಭಾ ಕಾರಂಜಿ ಕೇವಲ ಸ್ಪರ್ಧೆಯಲ್ಲ, ಅದು ಮಕ್ಕಳ ಆತ್ಮ ವಿಶ್ವಾಸವನ್ನು ಹೆಚ್ಚಿಸುವ, ಮಕ್ಕಳ ಕಾರ್ಯಕ್ರಮದ ಅಡಗಿರುವ ಕಲೆಯನ್ನು ಹೊರತರುವ, ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ಮಹಾಯಜ್ಞ ಎಂದರು. ಜಿಲ್ಲಾ ಯೋಜನ ಸಮನ್ವಯಾಧಿಕಾರಿ ಸೌಮ್ಯ ಪೊನ್ನಪ್ಪ, ಮಕ್ಕಳಿಗೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಸಲಹೆ ನೀಡಿದರು. ವಿಷಯ ಪರಿವೀಕ್ಷರಾದ ಬಿಂದು ಮಾತನಾಡಿ, ಎಲ್ಲರೂ ವೇದಿಕೆಗೆ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಧೈರ್ಯವೇ ದೊಡ್ಡ ಗೆಲುವು ಎಂಬುದನ್ನು ಅರಿತು, ವಿದ್ಯಾರ್ಥಿಗಳು ಕಲೋತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದು, ಉಳಿದ ವಿದ್ಯಾರ್ಥಿಗಳಿಗೆ ಇದು ಮಾರ್ಗದರ್ಶಕವಾಗಿದೆ ಎಂದರು. ಉತ್ಸಾಹದಿಂದ ಭಾಗವಹಿಸಿದ ವಿದ್ಯಾರ್ಥಿಗಳು ವಿಶಿಷ್ಟ ಶೈಲಿಯಲ್ಲಿ ತಮ್ಮ ತಮ್ಮ ಪ್ರತಿಭೆಯನ್ನು ಹೊರಹಾಕಿದರು. ಕಾರ್ಯಕ್ರಮದಲ್ಲಿ ಪರಿವೀಕ್ಷಕರೂ, ಸಹ ಸಂಯೋಜಕರಾದ ಎಸ್.ಬಿ.ಶರ್ಮಿಳಾ, ಆರ್.ಪಿ.ಮಂಜುಳಾ ಚಿತ್ತಾಪುರ, ಕಕ್ಕಬೆ ಕ್ಲಸ್ಟರ್ ಮಟ್ಟದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕಲ್ಪನಾ, ಕಕ್ಕಬೆ ಕ್ಲಸ್ಟರ್ ನ ಎಲ್ಲಾ ಶಾಲಾ ಶಿಕ್ಷಕರೂ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶಬ್ರೀನ್ ಫಾತಿಮಾ ಎಲ್ಲರನ್ನೂ ಸ್ವಾಗತಿಸಿದರು. ಗಗನ್ ನಿರೂಪಿಸಿದರು. ಶಹೀರ್ ಉಸ್ತಾದ್ ವಂದಿಸಿದರು.
ವರದಿ : ದುಗ್ಗಳ ಸದಾನಂದ.











