ಮಡಿಕೇರಿ ನ.19 NEWS DESK : ಕೊಡಗಿನ ವಿಶಿಷ್ಟ ಮತ್ತು ಸಂಭ್ರಮದ ಹಬ್ಬಗಳಲ್ಲಿ ಒಂದಾಗಿರುವ ಪುತ್ತರಿ (ಹುತ್ತರಿ) ಯನ್ನು ಡಿಸೆಂಬರ್ 4 ರಂದು ಆಚರಿಸಲು ಸಂಪ್ರದಾಯದಂತೆ ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ಬುಧವಾರದಂದು ದಿನ ಮತ್ತು ಗಳಿಗೆಯನ್ನು ಗೊತ್ತುಪಡಿಸಲಾಯಿತು. ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ದೇವಾಲಯ ಸಮಿತಿ ಪ್ರಮುಖರು, ಮುಜರಾಯಿ ಇಲಾಖಾ ಪ್ರಮುಖರು, ದೇಶ ತಕ್ಕರು, ನಾಡ ತಕ್ಕರ ಸಮ್ಮುಖದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬಂದಂತೆ ಕಣಿಯ ಸಮೂಹದ ಪ್ರಮುಖರು ಪುತ್ತರಿ (ಹುತ್ತರಿ) ಮತ್ತು ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಕಲಾಡ್ಚ ಹಬ್ಬಕ್ಕೆ ದಿನ ನಿಗದಿ ಮಾಡಿದರು. ದೇವಾಲಯದಲ್ಲಿ ದಿನ ನಿಗದಿ ಪಡಿಸಿದಂತೆ ಡಿ.4 ರಂದು ರೋಹಿಣಿ ನಕ್ಷತ್ರದಲ್ಲಿ ಹುತ್ತರಿ ಹಬ್ಬ ನಡೆಯಲಿದೆ. ಅಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ರಾತ್ರಿ 8.10 ಗಂಟೆಗೆ ನೆರೆ ಕಟ್ಟುವುದು, ರಾತ್ರಿ 9.10 ಗಂಟೆಗೆ ಕದಿರು ತೆಗೆಯುವುದು ಮತ್ತು ಭೋಜನಕ್ಕೆ 10.10 ಗಂಟೆ ಸಮಯವನ್ನು ನಿಗದಿಪಡಿಸಲಾಗಿದೆ. :: ಸಾರ್ವಜನಿಕ ಹಬ್ಬಾಚರಣೆ :: ಸಾರ್ವಜನಿಕವಾಗಿ ರಾತ್ರಿ 8.40 ಗಂಟೆಗೆ ನೆರೆ ಕಟ್ಟುವುದು, ರಾತ್ರಿ 9.40 ಗಂಟೆಗೆ ಕದಿರು ತೆಗೆಯುವುದು ಮತ್ತು ಭೋಜನಕ್ಕೆ ರಾತ್ರಿ 10.40 ಗಂಟೆಯೆಂದು ಸಮಯ ನಿಗದಿಯಾಗಿದೆ. :: ಕಲಾಡ್ಚ ಹಬ್ಬ :: ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ಹುತ್ತರಿ ಹಬ್ಬದ ದಿನವಾದ ಡಿ.4 ರಂದೇ ಕಲಾಡ್ಚ ಹಬ್ಬವನ್ನು ನಡೆಸಲು ದಿನವನ್ನು ನಿಗದಿಪಡಿಸಲಾಯಿತು.











