ಕುಶಾಲನಗರ ನ.19 NEWS DESK : ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಡಿಕೇರಿಯ ವೈದ್ಯಕೀಯ ಕಾಲೇಜಿನ ಮಕ್ಕಳ ತಜ್ಞರು ಮತ್ತು ಸಹಾಯಕ ಪ್ರಾಧ್ಯಾಪಕರಾದ ಡಾ.ಕುಶ್ವಂತ್ ಕೋಳಿ ಬೈಲು ಮಾತನಾಡಿ, ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ, ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆಯು ತನ್ನದೇ ಇತಿಹಾಸ, ಸ್ಥಾನ ಹಾಗೂ ಮನ್ನಣೆ ಹೊಂದಿದೆ. ಮಾತೃಭಾಷೆ ಕನ್ನಡ ಭಾಷೆಯನ್ನು ಪ್ರೀತಿಸಿ ಗೌರವಿಸಿ ಬಳಸಬೇಕೆಂದು ವಿದ್ಯಾರ್ಥಿಗಳಲ್ಲಿ ಅವರು ಬಿನ್ನವಿಸಿದರು. ಜೊತೆಗೆ ವಿದ್ಯಾರ್ಥಿಗಳು ಎದುರಿಸುತ್ತಿರುವರ ಆರೋಗ್ಯ ಸಮಸ್ಯೆಗಳ ಕುರಿತಾಗಿ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಎಸ್.ಎಸ್.ಶ್ರೀದೇವಿ ಮಾತನಾಡಿ, ಪ್ರತಿ ಮಗು ಕೂಡ ಶ್ರೇಷ್ಠ ಸಾಧಕನಾಗಬೇಕು ಎಂಬುದು ಸರ್ಕಾರ, ಶಿಕ್ಷಕರು ಹಾಗೂ ಪೋಷಕರ ಮಹದಾಶಯವಾಗಿರುತ್ತದೆ ಅದನ್ನು ಈಡೇರಿಸುವ ನಿಟ್ಟಿನಲ್ಲಿ ವಸತಿ ಶಾಲೆಗಳು ಬಹಳ ಅಮೂಲ್ಯವಾದ ಪಾತ್ರ ನಿರ್ವಹಿಸುತ್ತಿವೆ ಎಂದರು. ವಸತಿ ಶಾಲೆಯ ಕನ್ನಡ ಶಿಕ್ಷಕರಾದ ರಮೇಶ್ ಕಾರ್ಯಕ್ರಮದ ನಿರೂಪಣೆ ಮಾಡಿ ಕನ್ನಡ ಭಾಷೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಈ ಸಂದರ್ಭ ಪೋಷಕ ಶಿಕ್ಷಕ ಪರಿಷತ್ ಸದಸ್ಯರುಗಳಾದ ಸುಬ್ರಮಣ್ಯ ಬಿ.ಎನ್.ನಾಗೇಶ್ ಪೂಜಾರಿ, ಶಿವಣ್ಣ, ಪ್ರಮೋದ್, ಮಂಜುನಾಥ್, ಕುಸುಮ, ಶಾಲಾ ಕಾಲೇಜಿನ ಎಲ್ಲಾ ಶಿಕ್ಷಕ ವೃಂದದವರು ಉಪನ್ಯಾಸಕ ಬಳಗದವರು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕರಾದ ಪುಟ್ಟರಾಜು ಪ್ರಾರ್ಥಿಸಿದರು ಶಿವಕುಮಾರ್ ಸ್ವಾಗತಿಸಿದರು ರೇವಣ್ಣ ವಂದಿಸಿದರು.











