
ಮಡಿಕೇರಿ NEWS DESK ನ.19 : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನ.26 ರಂದು ನಡೆಯುವ 35ನೇ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ವಾಂಸ ಡಾ.ಸಂಜೀವ್ ಚೋಪ್ರಾ ಅವರು ಮುಖ್ಯ ಅತಿಥಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಡಾ.ಸಂಜೀವ್ ಚೋಪ್ರಾ ಅವರು ಖ್ಯಾತ ಹಾರ್ವರ್ಡ್ ವಿದ್ವಾಂಸ, ಇತಿಹಾಸಕಾರ, ರಾಜಕೀಯ ವಿಜ್ಞಾನಿ, ಸಾರ್ವಜನಿಕ ಬುದ್ಧಿಜೀವಿ ಮತ್ತು ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದು, ಕೊಡವ ನ್ಯಾಷನಲ್ ಡೇಯಲ್ಲಿ ಭಾರತೀಯ ಸಂವಿಧಾನದ 5ನೇ ಶೆಡ್ಯೂಲ್ ಪಟ್ಟಿ ಅಡಿಯಲ್ಲಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಗಾಗಿ ಕೊಡವ ಅನ್ವೇಷಣೆಯ ಕುರಿತು ಭಾಷಣ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವ-ಆಡಳಿತ, ಎಸ್‌ಟಿ ವರ್ಗೀಕರಣ, ಕೊಡವ ಸ್ಯಾಕ್ರಮೆಂಟಲ್ ಗನ್-ತೋಕ್ ಹಕ್ಕು ಸೇರಿದಂತೆ ಆದಿಮಸಂಜಾತ ಏಕ-ಜನಾಂಗೀಯ, ಆನಿಮಿಸ್ಟಿಕ್ ಕೊಡವರಿಗಾಗಿ 10 ಗೌರವಾನ್ವಿತ ಗುರಿಗಳು ಹಾಗೂ ಹಕ್ಕೊತ್ತಾಯಗಳನ್ನು ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆಯಲ್ಲಿ ಮಂಡಿಸಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.










