ಮಡಿಕೇರಿ ನ.22 NEWS DESK : ಕೊಡಗು ಜಿಲ್ಲೆಗೆ ಸೂಕ್ತ ದಾಖಲಾತಿ, ಅನುಮತಿ ಸಹಿತ ತೆರಿಗೆ ಪಾವತಿಸದೇ ಹೊರ ರಾಜ್ಯದಿಂದ ಆಗಮಿಸಿದ್ದ ವಾಹನಗಳಿಗೆ ದಂಡ ವಿಧಿಸುವ ಮೂಲಕ ಕೊಡಗು ಪ್ರಾದೇಶಿಕ ಸಾರಿಗೆ ಇಲಾಖೆ ದಂಡದ ಬಿಸಿ ಮುಟ್ಟಿಸಿದೆ. ಜಿಲ್ಲಾ ಚೆಕ್ ಪೋಸ್ಟ್‍ಗಳಲ್ಲಿ ಈ ಕುರಿತು ತಪಾಸಣೆ ತೀವ್ರಗೊಳಿಸಿದ ಪರಿಣಾಮ ಅಕ್ಟೋಬರ್ 1ರಿಂದ ನವೆಂಬರ್ 19ರವರೆಗೆ 1 ಕೋಟಿ 46 ಲಕ್ಷ ರೂ. ದಂಡ ವಿಧಿಸಿ ರಾಜಸ್ವ ಸಂಗ್ರಹಿಸಲಾಗಿದೆ ಎಂದು ಕೊಡಗು ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆ ಆಯುಕ್ತ ಸತೀಶ್ ಅವರು ತಿಳಿಸಿದ್ದಾರೆ. ಸಾಮಾನ್ಯವಾಗಿ ಅಕ್ಟೋಬರ್‍ನಿಂದ ಜನವರಿ ತಿಂಗಳನ್ನು ಟೂರಿಸಂ ತಿಂಗಳು ಎಂದು ಪರಿಗಣಿಸಲಾಗುತ್ತಿದೆ. ಈ ಅವಧಿಯಲ್ಲಿ ಜಿಲ್ಲೆಯ ಚೆಕ್ ಪೋಸ್ಟ್‍ಗಳಲ್ಲಿ ಸಾರಿಗೆ ಇಲಾಖೆ ನಿರೀಕ್ಷಕರನ್ನು ನಿಯೋಜಿಸಿ ಹೊರ ರಾಜ್ಯದ ವಾಹನಗಳ ದಾಖಲಾತಿಗಳ್ನು ಪರಿಶೀಲಿಸಲಾಗುತ್ತದೆ. ಈ ಸಂದರ್ಭ ನೂರಾರು ವಾಹನಗಳು ತೆರಿಗೆ ಪಾವತಿಸದಿರುವುದು, ಸೂಕ್ತ ಅನುಮತಿ ಪಡೆಯದಿರುವುದು ಕಂಡು ಬಂದ ಕಾರಣ ದಂಡ ವಿಧಿಸುವ ಮೂಲಕ 1 ಕೋಟಿ 46 ಲಕ್ಷ ರೂ. ರಾಜಸ್ವ ಸ್ವೀಕರಿಸಲಾಗಿದೆ. ಇದರಿಂದ ಸರಕಾರದ ಆದಾಯಕ್ಕೂ ಲಾಭವಾಗಿದೆ ಎಂದು ಹೇಳಿದರು. ಇನ್ನು ಬೇರೆ ಜಿಲ್ಲೆ ಹೊರ ರಾಜ್ಯ ಸಹಿತ ವಾಹನಗಳಲ್ಲಿ ಅತೀ ಹೆಚ್ಚಿನ ಶಬ್ದ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ರೀತಿಯಲ್ಲೂ ವರ್ತಿಸುವ ವಾಹನಗಳ ವಿರುದ್ದವೂ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕುಶಾಲನಗರ ವ್ಯಾಪ್ತಿಯಲ್ಲಿ 4 ಟೂರಿಸ್ಟ್ ಬಸ್‍ಗಳ ವಿರುದ್ದ ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಪ್ರವಾಸದ ನೆಪದಲ್ಲಿ ಸಾರ್ವಜನಿಕರಿಗೆ ಅನಾನುಕೂಲ ಉಂಟು ಮಾಡುವ ವಾಹನಗಳ ವಿರುದ್ದವೂ ದಂಡ ವಿಧಿಸಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಆರ್‍ಟಿಓ ಸತೀಶ್ ಅವರು ಮಾಹಿತಿ ನೀಡಿದರು.











