ಸೋಮವಾರಪೇಟೆ ನ.27 NEWS DESK : ವಿದ್ಯಾರ್ಥಿಗಳು ಪರಿಸರ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರಬೇಕೆಂದು ಪಟ್ಟಣದ ಸಾಯಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಇಮಾನಿ ಸಲಹೆ ನೀಡಿದರು. ವಿಶ್ವ ವೃಕ್ಷ ಮತ್ತು ಸ್ವಾಸ್ಥ್ಯ ಫೌಂಡೇಷನ್ ಹಾಗೂ ಸಾಯಿ ಆಸ್ಪತ್ರೆಯ ಸಹಯೋಗದೊಂದಿಗೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪರಿಸರ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಉತ್ತಮ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು. ಪರಿಸರ ಸಂರಕ್ಷಣೆಯ ಉದ್ದೇಶದಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡವನ್ನು ನೆಡಬೇಕು ಎಂದು ಮನವಿ ಮಾಡಿದರು. ವಿಶ್ವ ವೃಕ್ಷಮತ್ತು ಸ್ವಾಸ್ಥ್ಯ ಫೌಂಡೇಷನ್ ಸಂಯೋಜಕ ದೇವರಾಜ್ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಮತ್ತು ಸಮುದಾಯಗಳು ಒಂದು ಕೋಟಿಗೂ ಹೆಚ್ಚು ಗಿಡ ನೆಡುವುದಕ್ಕೆ ಗುರಿಯನ್ನು ಹೊಂದಬೇಕು ಎಂದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬೆಳ್ಯಪ್ಪ, ಸಂಪನ್ಮೂಲ ವ್ಯಕ್ತಿ ಎನ್.ವಿ.ಅಭಿಶೇಕ್ ಮಾತನಾಡಿದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ಕಾರ್ಡ್ ನೀಡಲಾಯಿತು.










