ಗೋಣಿಕೊಪ್ಪ ನ.28 NEWS DESK : ಪೋಲಿಯೋ ನಿರ್ಮೂಲನೆಗೆ ಅಳವಡಿಸುವ ಲಸಿಕೆಗೆ ಕಳೆದ ಬಾರಿ ಮೂರು ಬಿಲಿಯನ್ ಅಸಾಧಾರಣ ಮೊತ್ತದ ವೆಚ್ಚವನ್ನು ರೋಟರಿ ಸಂಸ್ಥೆ ನಿಭಾಯಿಸಿದೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ಪಿ.ಕೆ ರಾಮಕೃಷ್ಣ ತಿಳಿಸಿದರು. ಗೋಣಿಕೊಪ್ಪ ರೋಟರಿ ಸಂಸ್ಥೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಹಿನ್ನೆಲೆ ಕುಕೂನ್ ಸಭಾಂಗಣದಲ್ಲಿ ಹಮ್ಮಿಕೊಂಡ ಸರ್ವ ಸದಸ್ಯರ ಸಮಾಲೋಚನ ಸಭೆಯಲ್ಲಿ ಮಾತನಾಡಿದರು. ಪ್ರಪಂಚದಲ್ಲಿ 39 ಪೋಲಿಯೋ ಪ್ರಕರಣಗಳು ಬೆಳಕಿಗೆ ಬಂದಿದೆ. ಅವುಗಳಲ್ಲಿ 30 ಪ್ರಕರಣ ಪಾಕಿಸ್ತಾನ ಮತ್ತು 9 ಪ್ರಕರಣ ಅಪಘಾನಿಸ್ತಾನದಲ್ಲಿ ಕಾಣಿಸಿಕೊಂಡಿದೆ. ಪ್ರಸ್ತುತ ವರ್ಷ ಡಿ.21ರಂದು ಪೋಲಿಯೋ ಲಸಿಕೆ ಕಾರ್ಯಕ್ರಮ ದೇಶದಾದ್ಯಂತ ನಡೆಯಲಿದೆ ಎಂದು ಹೇಳಿದರು. ಪೋಲಿಯೋ ನಿರ್ಮೂಲನೆ ಮಾಡುವುದೇ ರೋಟರಿ ಸಂಸ್ಥೆಯ ಬಹುದೊಡ್ಡ ಉದ್ದೇಶವಾಗಿ ಹಬ್ಬಿಕೊಂಡಿದೆ. ಪ್ರತಿಯೊಬ್ಬರು 5 ವರ್ಷದ ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕುವ ಮೂಲಕ ಪೆÇಲೀಯೋ ನಿರ್ಮೂಲನೆಯೆಡೆಗೆ ಜಾಗೃತರಾಗಬೇಕೆಂದು ಸಲಹೆ ನೀಡಿದರು. ಇದರ ಜೊತೆಗೆ ಅಪಾರವಾದ ಸಾಮಾಜಿಕ ಕಳಕಳಿಯನ್ನು ಸಂಸ್ಥೆ ಹೊಂದಿದೆ. ರಕ್ತ ಸಂಗ್ರಹ ಘಟಕ, ಮತ್ತು ಚರ್ಮಗಳ ಶಿತಲೀಕರಣ ಘಟಕಗಳ ಸ್ಥಾಪನೆಗೆ ರೋಟರಿ ಸಂಸ್ಥೆ ಯೋಜನೆ ರೂಪಿಸಿಕೊಂಡಿದೆ ಎಂದು ಮಾಹಿತಿ ನೀಡಿದರು. ಪ್ರಪಂಚದಾದ್ಯಂತ ಪೋಲಿಯೋ ಲಸಿಕೆ ಅಭಿಯಾನವನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ರೋಟರಿ ಸಂಸ್ಥೆ ನಿರ್ವಹಿಸಿದೆ, ಈ ಮೂಲಕ ಪ್ರಪಂಚದಾದ್ಯಂತ ರೋಟರಿ ಸಂಸ್ಥೆ ಗಮನ ಸೆಳೆಯುತ್ತಿದೆ ಎಂದರು. ಸಹಾಯಕ ಗವರ್ನರ್, ದಿಲನ್ ಚಂಗಪ್ಪ ಮಾತನಾಡಿ, ರೋಟರಿ ಸಂಸ್ಥೆ ಸುಮಾರು ಹತ್ತಕ್ಕೂ ಹೆಚ್ಚು ಕಾರ್ಯಯೋಜನೆಗಳನ್ನ ರೂಪಿಸಿಕೊಂಡು ಸಮಾಜಮುಖಿಯಾಗಿ ಸಭೆಯನ್ನು ತೊಡಗಿಸಿಕೊಳ್ಳಲು ಚಿಂತನೆ ಹರಿಸಿದ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸುಣ್ಣ ಬಣ್ಣ ಬಳಿಯುವುದು, ಹೆಣ್ಣು ಮಕ್ಕಳು ರಕ್ತದಾನ ಮಾಡುವಂತೆ ಮನ ಒಲಿಸುವುದು, ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಕರ್ಯವನ್ನು ಒದಗಿಸಿಕೊಡುವುದು, ಮಾನಸಿಕ ಒತ್ತಡಗಳಿಗೆ ಒಳಪಟ್ಟವರಿಗೆ ಚಿಕಿತ್ಸೆ ಮತ್ತು ಕೌನ್ಸಲಿಂಗ್ ನೀಡುವುದು ಮತ್ತು ಕಾಡು, ನೀರು, ಮಣ್ಣು ಈ ಪರಿಸರವನ್ನ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕುಕೂನ್ ಸಭಾಂಗಣದಲ್ಲಿ ಗೋಣಿಕೊಪ್ಪ ರೋಟರಿ ಸಂಸ್ಥೆ ಅಧ್ಯಕ್ಷ ಪಿಕೆ ವಿಜಯಕುಮಾರ್ ಅಧ್ಯಕ್ಷತೆಯಲ್ಲಿ, ಗೋಣಿಕೊಪ್ಪದ ಮೋದಕ್ ನ್ಯೂಸ್ ಏಜೆನ್ಸಿಯ ಮೂಲಕ ಮುಂಜಾನೆ ಮನೆ ಮನೆಗೆ ಪತ್ರಿಕೆ ಹಚ್ಚುವ ಬೆಳಗಿನ ಯೋಧ ಮಂಜು ಮತ್ತು ಗೋಣಿಕೊಪ್ಪ ನಗರದ ಮೊದಲ ಮಹಿಳಾ ಆಟೋ ಚಾಲಕಿ ಮಂಜುಳಾ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಬೆಂಗಳೂರಿನ ಕೆಎಫ್‍ಕೆಸಿಸಿಐ ಸಂಸ್ಥೆ ನೀಡುವ ಅತ್ಯುತ್ತಮ ಮಹಿಳಾ ಸಾಧಕಿ ಪ್ರಶಸ್ತಿ ಪಡೆದುಕೊಂಡ ಚೇಂದಂಡ ಸುಮಿ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಪ್ರಮೋದ್ ಕಾಮತ್ ವಾಚಿಸಿದರು, ಸನ್ಮಾನಿತರ ಪರಿಚಯವನ್ನು, ಖಜಾಂಚಿ ಜಪ್ಪೆಕೋಡಿ ಸುಭಾಷಿಣಿ ಮತ್ತು ದೀನಾ ನೆರವೇರಿಸಿದರು. ಈ ಸಂದರ್ಭ ಝೋನಲ್ ರೆಫ್ಟಿನೆಂಟ್ ಆದಿತ್ಯ ಕೆ.ಹೆಚ್. ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರುಗಳು ಹಾಜರಿದ್ದರು.











