ವಿರಾಜಪೇಟೆ ನ.28 NEWS DESK : ವಿರಾಜಪೇಟೆ ಮಾಜಿ ಸೈನಿಕರ ಸಂಘದ ವತಿಯಿಂದ ಮೇಜರ್ ಜನರಲ್ ಬಾಚಿಮಂಡ ಕಾರ್ಯಪ್ಪ ಅವರನ್ನು ಸನ್ಮಾನಿಸಲಾಯಿತು. ವಿರಾಜಪೇಟೆಯ ಮಾಜಿ ಸೈನಿಕರ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಹಾಗೂ ಸದಾ ಸೈನಿಕರ ಬಗ್ಗೆ ಅಪಾರ ಕಾಳಜಿ ಹೊಂದಿ, ಅವರ ಅಭಿವೃದ್ಧಿಗೆ ಸಹಕರಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವ ಮೇಜರ್ ಜನರಲ್ ಕಾರ್ಯಪ್ಪ ಅವರು, ಪ್ರಸಕ್ತ ಕಟ್ಟಡದ ಮೂರನೇ ಅಂತಸ್ತಿನ ನಿರ್ಮಾಣ ಕಾಮಗಾರಿಗೆ ರೂ. 1,00,000 ದೇಣಿಗೆ ಮತ್ತು 5,00,000 ಬಡ್ಡಿ ರಹಿತ ಸಾಲ ನೀಡಿರುವ ಹಿನ್ನಲೆಯಲ್ಲಿ ಅವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಅವರು, ಭಾರತೀಯ ಸೇನೆಯ ತವರೂರಾದ ಕೊಡಗು ಜಿಲ್ಲೆಯಲ್ಲಿ ಮಡಿಕೇರಿಯಲ್ಲಿ ಮಾತ್ರ ಒಂದು ಸಿಎಸ್‍ಡಿ ಕ್ಯಾಂಟೀನ್ ಚಾಲನೆಯಲ್ಲಿತ್ತು. ಗೋಣಿಕೊಪ್ಪ, ಬಿರುನಾಣಿ, ಬಿ.ಶೆಟ್ಟಿಗೇರಿ, ಶೆಟ್ಟಿಗೇರಿ, ಕುಟ್ಟ, ಹೀಗೆ ದೂರದ ಗ್ರಾಮದ ಮಾಜಿ ಸೈನಿಕರಿಗೆ ಮಡಿಕೇರಿಗೆ ಹೋಗಿ ಕ್ಯಾಂಟೀನ್ ಸೌಲಭ್ಯ ಪಡೆದುಕೊಳ್ಳುವುದು ತುಂಬಾ ಅನಾನುಕೂಲತೆಗಳನ್ನು ಎದುರಿಸಬೇಕಾಗಿತ್ತು. ಇದರ ಅರಿವನ್ನು ಮನಗಂಡ ಮೇಜರ್ ಜನರಲ್ ಬಾಚಿಮಂಡ ಕಾರ್ಯಪ್ಪ ಹಾಗೂ ವಿರಾಜಪೇಟೆ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳ ಸತತ ಪ್ರಯತ್ನದ ಫಲವಾಗಿ ವಿರಾಜಪೇಟೆಯ ತಾಲ್ಲೂಕು ಮೈದಾನದ ಹತ್ತಿರದ ಮಾಜಿ ಸೈನಿಕ ಸಂಘದ ಕಟ್ಟಡದಲ್ಲಿ ಕ್ಯಾಂಟೀನ್ ಸೌಲಭ್ಯವು ಪ್ರಾರಂಭವಾಯಿತು. ನಂತರ ದಾನಿಗಳ, ಮಾಜಿ ಸೈನಿಕರ, ಕ್ಯಾಂಟಿನ್ ಸಿಬ್ಬಂದಿಗಳ ಹಾಗೂ ಮಾಜಿ ಸೈನಿಕ ಸಂಘದ ಪದಾಧಿಕಾರಿಗಳ ಸಹಾಯ ಹಾಗೂ ಸತತ ಪ್ರಯತ್ನದಿಂದ ಮೂರನೇ ಹಂತಸ್ತಿನ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದರು. ಸೇನೆಯ ಉನ್ನತ ಮಟ್ಟದ ಪದವಿಯಾದ ಮೇಜರ್ ಜನರಲ್ ರ್ಯಾಂಕ್ ಅಲಂಕರಿಸಿ ನಿವೃತ್ತಿ ಹೊಂದಿದ ಇವರು, ಮಾಜಿ ಸೈನಿಕರಿಗೆ ಸದಾ ಬೆನ್ನೆಲುಬಾಗಿರುವ, ಸದಾ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತ ಕುಟುಂಬಗಳಿಗೆ ಸರಕಾರದಿಂದ ಸಿಗಬೇಕಾದ ಸೌಕರ್ಯಗಳ ಬಗ್ಗೆ ಧ್ವನಿ ಎತ್ತಿ ಅದನ್ನು ಪರಿಪೂರ್ಣಗೊಳಿಸುವ ಮೇಜರ್ ಜನರಲ್ ಕಾರ್ಯಪ್ಪ ಇವರ ಸತತ ಪ್ರಯತ್ನದಿಂದ ವಿರಾಜಪೇಟೆಗೆ ಕ್ಯಾಂಟೀನ್ ಮಾತ್ರವಲ್ಲದೆ ಆಧುನಿಕತೆಯನ್ನು ಹೊಂದಿದ ಇಸಿಹೆಚ್‍ಎಸ್ ಸೌಲಭ್ಯಕ್ಕೆ ಸರಕಾರದಿಂದ ಮಾನ್ಯತೆ ದೊರೆತು ಕಾಮಗಾರಿ ಪ್ರಾರಂಭಗೊಂಡಿರುವುದು ಸಂತಸದ ವಿಷಯವಾಗಿದೆ ಎಂದರಲ್ಲದೆ ಮಾಜಿ ಸೈನಿಕರಿಗೋಸ್ಕರ ನಿಸ್ವಾರ್ಥ ಸೇವೆ ಹಾಗೂ ಪ್ರೀತಿ-ವಿಶ್ವಾಸ ಇವರ ಹೃದಯ ಮಿಡಿತ ಅರಿತು ಸಂಘದ ವತಿಯಿಂದ ಸನ್ಮಾನಿಸಿದ್ದೇವೆ ಎಂದರು. ಸಂಘದ ನಿದೇಶಕರಾದ ಕಡಂಗ ನಿವಾಸಿ ಮಾಜಿ ಸೈನಿಕ ಎಂ.ಕೆ.ಸಲಾಂ ಮಾತನಾಡಿ, ಇವತ್ತು ಕ್ಯಾಂಟೀನ ಸೌಲಭ್ಯವು ಕೊಡಗಿನ ಎಲ್ಲಾ ಮಾಜಿ ಸೈನಿಕರು ಪಡೆದುಕೊಳ್ಳುವುದರ ಜೊತೆ ಪ್ರತ್ಯೇಕವಾಗಿ ಬಿರುನಾಣಿ, ಬಿ ಶೆಟ್ಟಿಗೇರಿ, ಕುಟ್ಟ ಭಾಗದವರಿಗೆ ಹಾಗೂ ನಮ್ಮ ನೆರೆ ರಾಜ್ಯವಾದ ಕೇರಳದ ಕೊಡಗಿನ ಗಡಿ ಭಾಗಗಳ ಜಿಲ್ಲೆಗಳಿಗೂ ತುಂಬಾ ಅನುಕೂಲತೆ ಆಗಿದೆ. ಸದಾ ಮಾಜಿ ಸೈನಿಕರ ಹಾಗೂ ಅವರ ಅವಲಂಬಿತರ ಬಗ್ಗೆ ಹೆಚ್ಚು ಕಾಳಜಿ ಹಾಗೂ ಮುತುವರ್ಜಿಯನ್ನು ವಹಿಸುವ ಮಾಜಿ ಸೈನಿಕ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ ನಿವೃತ್ತ ಸೈನಿಕರ ಕಷ್ಟಕಾರ್ಪಣ್ಯಗಳಿಗೆ ಸದಾ ನಮ್ಮೊಂದಿಗೆ ಇದ್ದು ಹಸನ್ಮುಖರಾಗಿರುವ ವ್ಯಕ್ತಿ. ಚಪ್ಪಂಡ ಹರೀಶ್ ಮತ್ತು ಸಂಘದ ಪದಾಧಿಕಾರಿಗಳು, ಮೇಜರ್ ಜನರಲ್ ಕಾರ್ಯಪ್ಪ ಅವರು ಕ್ಯಾಂಟೀನ್ ಸೌಲಭ್ಯತೆಯನ್ನು ಹೆಚ್ಚಿಸಲು ಕಟ್ಟಡದ ಮೂರನೇ ಅಂತಸ್ತಿನ ನಿರ್ಮಾಣದ ಬಗ್ಗೆ ಯೋಚಿಸಿ ಧನ ಸಹಾಯ ಒದಗಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಅಧ್ಯಕ್ಷ ಹರೀಶ್ ಅವರು 1,00,000 ದೇಣಿಗೆ ನೀಡಿರುವುದು ಶ್ಲಾಘನೀಯವೆಂದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಚಂದ್ರಶೇಖರ್ ಬಿ.ಎಸ್, ಚೇಂದ್ರಿಮಾಡ ಕೆ.ನಂಜಪ್ಪ, ತೋರೆರ ಪೂವಯ್ಯ, ಪುಗ್ಗೆರ ಎಸ್ ನಂದ, ಅಣ್ಣಳಮಾಡ ಡಿ.ಸುಬ್ಬಯ್ಯ, ಪಟ್ರಪಂಡ ಎನ್.ಚಂಗಪ್ಪ ಹಾಗೂ ಕಡಂಗದ ಉದ್ಯಮಿ ಸಲಾಂ ಎಂ.ಕೆ ಉಪಸ್ಥಿತರಿದ್ದರು.











