ಮಡಿಕೇರಿ ನ.28 NEWS DESK : ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ ಅವರು ಕಳೆದ 45 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ಯೋಗ್ಯ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಅತ್ಯಧಿಕ ಸ್ಥಾನಗಳಲ್ಲಿ ಗೆಲವು ಸಾಧಿಸಿದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸಂದರ್ಭ ಆರಂಭದಲ್ಲೇ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವ ಎಲ್ಲಾ ಅರ್ಹತೆ ಶಿವಕುಮಾರ್ ಅವರಿಗಿದ್ದರೂ ಪಕ್ಷಕ್ಕಾಗಿ ಅಂದು ಅವರು ತ್ಯಾಗಮಯಿಯಾಗಿದ್ದರು. ಮುಖ್ಯಮಂತ್ರಿ ಸ್ಥಾನದ ಮೊದಲ ಅವಧಿಯ ಅಧಿಕಾರ ಇದೀಗ ಮುಗಿಯುವ ಹಂತದಲ್ಲಿದ್ದು, ಎರಡನೇ ಅವಧಿಯ ಅಧಿಕಾರ ನ್ಯಾಯಯುತವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಗಬೇಕಾಗಿದೆ. 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೃಹತ್ ಮೊತ್ತದ ಸ್ಥಾನಗಳನ್ನು ಗೆಲ್ಲಲು ಶಿವಕುಮಾರ್ ಅವರು ಪ್ರಮುಖ ಕಾರಣಕರ್ತರಾಗಿದ್ದಾರೆ. ಇವರ ಶ್ರಮವನ್ನು ಪಕ್ಷದ ಹೈಕಮಾಂಡ್ ಈಗಲಾದರೂ ಪುರಸ್ಕರಿಸಬೇಕು. ಆ ಮೂಲಕ ಮುಖ್ಯಮಂತ್ರಿ ಸ್ಥಾನವನ್ನು ನೀಡಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಸಂಕಷ್ಟ ಎದುರಾದರೂ ಕಾಂಗ್ರೆಸ್ ಪಕ್ಷಕ್ಕಾಗಿ ಪ್ರಾಮಾಣಿಕತೆಯಿಂದ ದುಡಿದಿದ್ದಾರೆ. ವಿವಿಧ ಖಾತೆಗಳ ಸಚಿವರಾಗಿ ಪ್ರಸ್ತುತ ಉಪಮುಖ್ಯಮಂತ್ರಿಯಾಗಿ ಯಶಸ್ವೀ ಆಡಳಿತ ನೀಡಿದ್ದಾರೆ. ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಮತ್ತು ನಾಡಿನ ಅಭಿವೃದ್ಧಿಗಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಎದೆಗಾರಿಕೆ ಡಿ.ಕೆ.ಶಿವಕುಮಾರ್ ಅವರಿಗಿದೆ. ಆದ್ದರಿಂದ ಪಕ್ಷದ ಹೈಕಮಾಂಡ್ ತಡ ಮಾಡದೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂದು ಎಸ್.ಎಂ.ಚಂಗಪ್ಪ ಒತ್ತಾಯಿಸಿದ್ದಾರೆ.











