ಮಡಿಕೇರಿ ನ.28 NEWS DESK : ಸಮಾಜದಲ್ಲಿ ಪೌರಕಾರ್ಮಿಕರು ತೆರೆಯ ಹಿಂದಿನಂತೆ ಮೌನವಾಗಿ, ಸದ್ದಿಲ್ಲದೆ ಕರ್ತವ್ಯ ನಿರ್ವಹಿಸುತ್ತಾರೆ. ಆದ್ದರಿಂದ ಪೌರಕಾರ್ಮಿಕರ ವೃತ್ತಿಯನ್ನು ಎಷ್ಟು ಗೌರವಿಸಿದರೂ ಸಾಲದು ಎಂದು ಶಾಸಕ ಡಾ.ಮಂತರಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ. ನಗರಸಭೆ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ‘ಪೌರಕಾರ್ಮಿಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಡಿಕೇರಿ ನಗರ ಸ್ವಚ್ಛತೆ ಹಾಗೂ ಪರಿಶುದ್ಧ ಗಾಳಿಗೆ ಹೆಸರಾಗಿರಲು ಪೌರಕಾರ್ಮಿಕರ ಸೇವೆಯು ಸಹ ಒಂದಾಗಿದೆ. ಆ ನಿಟ್ಟಿನಲ್ಲಿ ಪೌರಕಾರ್ಮಿಕರನ್ನು ಗೌರವಿಸಬೇಕು. ಜೊತೆಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂದು ಶಾಸಕರು ನುಡಿದರು. ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ 12 ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಹಾಗೆಯೇ ಹೊರಗುತ್ತಿಗೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂ ಮಾಡಬೇಕಿದೆ. ಪೌರಕಾರ್ಮಿಕರಿಗೆ ವಿಮಾ ಸೌಲಭ್ಯ ದೊರೆಯಬೇಕು. ಹಾಗೆಯೇ ಕಾಲ ಕಾಲಕ್ಕೆ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸುವಂತಾಗಬೇಕು ಎಂದು ಶಾಸಕರು ಸಲಹೆ ನೀಡಿದರು.‘ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.’ ಪೌರಕಾರ್ಮಿಕರು ವೃತ್ತಿಯನ್ನು ಗೌರವಿಸಿ, ಶಿಸ್ತಿನ ಶಿಫಾಯಿಗಳಂತೆ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತೀ ನಿತ್ಯ ಪೌರಕಾರ್ಮಿಕರನ್ನು ಸ್ಮರಿಸಬೇಕು ಎಂದರು. ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಮಾತನಾಡಿ, ಪೌರಕಾರ್ಮಿಕರು ಮಡಿಕೇರಿ ನಗರ ಸ್ವಚ್ಛತೆ ಹಾಗೂ ಪರಿಸರ ಶುಚಿತ್ವಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಂತವರನ್ನು ಸದಾ ಸ್ಮರಿಸಬೇಕು. ಪೌರಕಾರ್ಮಿಕರು ತಮ್ಮ ವೃತ್ತಿಯ ಜೊತೆಗೆ ಆರೋಗ್ಯ ಕಡೆಯು ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಪೌರಕಾರ್ಮಿಕರು ವೃತ್ತಿಯಲ್ಲಿ ಶ್ರದ್ಧೆಯಿಂದ ದುಡಿಯುತ್ತಾರೆ. ಇವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು. ಆ ನಿಟ್ಟಿನಲ್ಲಿ ವೃತ್ತಿಯನ್ನು ಗೌರವಿಸಬೇಕು. ಇತರರಂತೆ ಬದುಕು ನಡೆಸಲು ಮುಂದಾಗಬೇಕು ಎಂದು ಕಲಾವತಿ ಹೇಳಿದರು. ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಅವರು ಮಾತನಾಡಿ ಪೌರಕಾರ್ಮಿಕರು ಸ್ವಚ್ಛತಾ ಸೇನಾನಿಗಳಾಗಿದ್ದು, ಪೌರಕಾರ್ಮಿಕರಿಗೆ ಸಮಾಜ ಸದಾ ಅಬಾರಿಯಾಗಿರಬೇಕು. ದಸರಾ ಸೇರಿದಂತೆ ರಾಷ್ಟ್ರೀಯ ಹಬ್ಬ ವಿಶೇಷ ಸಂದರ್ಭದಲ್ಲಿ ಇವರ ಪಾತ್ರ ಹೆಚ್ಚಿನದ್ದು ಎಂದು ಹೇಳಿದರು. ನಗರಸಭೆ ಸದಸ್ಯರಾದ ಅನಿತಾ ಪೂವಯ್ಯ ಅವರು ಮಾತನಾಡಿ ಪೌರಕಾರ್ಮಿಕರು ತಾವು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಮುಖಗವಸು, ಕೈಗವಸು, ಕಾಲಿಗೆ ಬೂಟು ಹಾಕಿಕೊಂಡು ಕರ್ತವ್ಯ ನಿರ್ವಹಿಸಬೇಕು. ಇದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು. ಪೌರಕಾರ್ಮಿಕರು ಎಲ್ಲರಂತೆ ಬದುಕು ನಡೆಸಬೇಕು. ಯಾವುದೇ ಕಾರಣಕ್ಕೂ ವಿಚಲಿತರಾಗದೆ ಉತ್ತಮ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಅನಿತಾ ಪೂವಯ್ಯ ಅವರು ನುಡಿದರು. ಸದಸ್ಯರಾದ ಅರುಣ್ ಶೆಟ್ಟಿ ಅವರು ಮಾತನಾಡಿ, ಮಡಿಕೇರಿ ನಗರಸಭೆಯಲ್ಲಿ 23 ಸದಸ್ಯರು ಹಾಗೂ 5 ನಾಮ ನಿರ್ದೇಶಿತ ಸದಸ್ಯರಿದ್ದು, ನಮ್ಮ ಪೌರಕಾರ್ಮಿಕರ ದಿನಾಚರಣೆಗೆ ಕೇವಲ 5 ಮಂದಿ ಆಗಮಿಸಿದ್ದಾರೆ. ಈ ರೀತಿ ಆದಲ್ಲಿ ಪೌರಕಾರ್ಮಿಕರನ್ನು ಎಷ್ಟರ ಮಟ್ಟಿಗೆ ಗೌರವಿಸುತ್ತೇವೆ ಎಂಬುದು ತಿಳಿಯುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಪ್ರಸ್ತಾವಿಕವಾಗಿ ಮಾತನಾಡಿದ ನಗರಸಭೆ ಎಂಜಿನಿಯರ್ ಸತೀಶ್ ಅವರು ಬಿಸಿಲು, ಮಳೆ ಗಾಳಿ,ಚಳಿ ಎನ್ನದೆ ಪೌರಕಾರ್ಮಿಕರು ಸೂರ್ಯ ಹುಟ್ಟುವುದಕ್ಕೂ ಮೊದಲೇ ಕರ್ತವ್ಯಕ್ಕೆ ತೆರಳಿ ಕರ್ತವ್ಯ ನಿರ್ವಹಿಸುತ್ತಾರೆ ಎಂದರು. ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸನ್ಮಾನಿಸಲಾಯಿತು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ, ನಾಮ ನಿರ್ದೇಶಿತ ಸದಸ್ಯರಾದ ಜುಲೈಕಾಬಿ, ಮುತ್ತುರಾಜ್, ಪ್ರಮುಖರಾದ ಪ್ರಕಾಶ್ ಆಚಾರ್ಯ, ಇತರರು ಇದ್ದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹೇಮಂತ್ ಕುಮಾರ್ ಸ್ವಾಗತಿಸಿದರು. ನಗರಸಭೆ ಲೆಕ್ಕಾಧಿಕಾರಿ ತಾಹಿರ್ ನಿರೂಪಿಸಿ, ವಂದಿಸಿದರು. ಅನಿತಾ ಮತ್ತು ತಂಡದವರು ನಾಡಗೀತೆ ಹಾಡಿದರು.











