
ಬೆಂಗಳೂರು ಡಿ.1 NEWS DESK : ಹಿಂದುಳಿದವರ-ದಲಿತರ-ಮಹಿಳೆಯರ ಮೀಸಲಾತಿಯನ್ನು ವಿರೋಧಿಸಿದ್ದು ಬಿಜೆಪಿ- ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಗಳನ್ನು ವಿತರಿಸಿ ಹಾಗೂ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದರು. ಹೀಗಾಗಿ ಇವತ್ತು ಶೇ.50ರಷ್ಟು ಮಹಿಳಾ ಮೀಸಲಾತಿ ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್ಸಿನ ಕೊಡುಗೆ. ಇದನ್ನು ವಿರೋಧ ಮಾಡಿದ್ದು ಬಿಜೆಪಿಯ ಉಪಾಧ್ಯಕ್ಷರಾಗಿದ್ದ ರಾಜ್ಯಸಭಾ ಸದಸ್ಯ ರಾಮಾಜೋಯಿಸ್. ಇದನ್ನು ಅರ್ಥ ಮಾಡಿಕೊಳ್ಳಬೇಕು. ಸುಮ್ಮನೆ ಬಿಜೆಪಿಗೆ ಚಪ್ಪಾಳೆ ತಟ್ಟಬಾರದು ಎಂದರು. ಗ್ರಾಮದಿಂದಲೇ ಅಧಿಕಾರ, ಕೆಳಗಿನಿಂದ ಮೇಲಕ್ಕೆ ಹೋಗಬೇಕು ಎನ್ನುವ ವಿಕೇಂದ್ರೀಕರಣ ಗಾಂಧಿ, ನೆಹರೂ, ಲೋಹಿಯಾ ಅವರ ಕನಸಾಗಿತ್ತು. ನಮ್ಮದು ಹಳ್ಳಿಗಳ ದೇಶ. ಗ್ರಾಮ ಭಾರತ ಅಭಿವೃದ್ಧಿ ದೇಶ ಅಭಿವೃದ್ಧಿ ಸಾಧ್ಯವಿಲ್ಲ ಎಂದರು. ಹಳ್ಳಿಗಳ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ರಾಜೀವ್ ಗಾಂಧಿಯವರು ಪ್ರಧಾನಿ ಆದಾಗ ಸಂವಿಧಾನ ಪರಿಚ್ಛೇದ 73, 74 ಕ್ಕೆತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ತಂದರು. ಈ ತಿದ್ದುಪಡಿ ಬರುವವರೆಗೂ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿಯೇ ಇರಲಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದರು. ಸಮಾರಂಭದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ, ಸಚಿವರಾದ ಮಂಕಾಳ ವೈದ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.









