ಸೋಮವಾರಪೇಟೆ ಡಿ.2 NEWS DESK : ತಾಲ್ಲೂಕು ಒಕ್ಕಲಿಗರ ಸಂಘದ ವಿಶ್ವ ಮಾನವ ಕುವೆಂಪು ವಿದ್ಯಾ ಸಂಸ್ಥೆಯ ಕಾಲೇಜು ವಿಭಾಗದ ವಿದ್ಯಾರ್ಥಿಗಳು ಜೂನಿಯರ್ ಕಾಲೇಜಿನ ಗೇಟ್ ತನಕ ರಾಜ್ಯ ಹೆದ್ದಾರಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಪರಿಸರ ಸಂರಕ್ಷಣೆಯ ಸಂದೇಶ ನೀಡಿದರು. ರಸ್ತೆ ಬದಿಗಳಲ್ಲಿ ಹರಡಿದ್ದ ಪ್ಲಾಸ್ಟಿಕ್, ಕಾಗದ ಹಾಗೂ ತ್ಯಾಜ್ಯ ವಸ್ತುಗಳನ್ನು ತೆಗೆದು ಸ್ವಚ್ಚಗೊಳಿಸಿದರು. ಇದೇ ಸಂದರ್ಭ ಇನ್ನರ್ ವ್ಹೀಲ್ ಕ್ಲಬ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಕಾಲೇಜಿಗೆ ಕಸ ಸಂಗ್ರಹದ ಕಬ್ಬಿಣದ ತೊಟ್ಟಿಯನ್ನು ವಿದ್ಯಾಸಂಸ್ಥೆಗೆ ನೀಡಲಾಯಿತು. ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ಯುವ ಸಮೂದಾಯ ಸ್ವಯಂಪ್ರೇರಿತವಾಗಿ ಪರಿಸರ ರಕ್ಷಣೆಯ ಹೊಣೆ ಹೊತ್ತರೆ ನಮ್ಮ ಕೊಡಗು ನಿಜವಾದ ಅರ್ಥದಲ್ಲಿ ಸ್ವಚ್ಛ ಕೊಡಗು–ಸುಂದರ ಕೊಡಗು ಆಗಲಿದೆ ಎಂದು ಹೇಳಿದರು. ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮಾತನಾಡಿ, ಜೂನಿಯರ್ ಕಾಲೇಜಿನ ಮುಂದಿನ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವರಿಗೆ ತಕ್ಕ ಶಿಕ್ಷೆಯಾಗಬೇಕು. ವಿದ್ಯಾರ್ಥಿಗಳು ನಡೆದಾಡುವ ರಸ್ತೆಯಲ್ಲೇ ಕೋಳಿ ತ್ಯಾಜ್ಯಗಳನ್ನು ಎಸೆದು ಹೋಗುತ್ತಿದ್ದಾರೆ. ಅಂತಹವರಿಗೆ ಕಾನೂನಿನ ಶಿಕ್ಷೆಯಾಗಬೇಕು ಎಂದು ಹೇಳಿದರು. ಕಸ ಸಂಗ್ರಹ ಸ್ಥಳಗಳಲ್ಲಿ ಬೀದಿ ನಾಯಿಗಳು ಇರುತ್ತವೆ. ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದರೆ ಯಾರು ಜವಾಬ್ದಾರರು. ದನಕರುಗಳು ಕೂಡ ಪ್ಲಾಸ್ಟಿಕ್ ವಸ್ತುಗಳನ್ನು ತಿನ್ನುತ್ತವೆ. ಇದಕ್ಕೆಲ್ಲಾ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯವರು ಸೂಕ್ತ ಕ್ರಮ ತೆಗದುಕೊಳ್ಳಬೇಕು ಎಂದು ಹೇಳಿದರು. ಕಾಲೇಜು ಪ್ರಾಂಶುಪಾಲರಾದ ಮಿಲ್‍ಡ್ರೆಡ್ ಗೊನ್ಸಾಲ್ವೆಸ್ ಮಾತನಾಡಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳು ಅರಿಯಬೇಕು. ಪ್ರತಿದಿನ ಪರಿಸರಕ್ಕೆ ನಮ್ಮ ಕೊಡುಗೆಯನ್ನು ನೀಡುತ್ತಿರಬೇಕು. ಸ್ವಚ್ಛತಾ ಕಾರ್ಯದ ಮೂಲಕ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಬಗ್ಗೆ ನೇರ ಅನುಭವ ಪಡೆದುಕೊಳ್ಳಬಹುದು ಎಂದು ಪರಿಸರ ಸಂರಕ್ಷಣೆಯ ಅಗತ್ಯತೆ ಬಗ್ಗೆ ಒತ್ತಿ ಹೇಳಿದರು. ಇನ್ನರ್‍ವ್ಹೀಲ್ ಕ್ಲಬ್ ಅಧ್ಯಕ್ಷೆ ತನ್ಮಯಿ ಪ್ರವೀಣ್, ಐಎಸ್‍ಒ ನಂದಿನಿ ಗೋಪಾಲ್, ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ನಂದಕುಮಾರ್ ಇದ್ದರು.











