ಮಡಿಕೇರಿ ಡಿ.5 NEWS DESK : ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ದೇಶಾದ್ಯಾಂತ ನಡೆಸುತ್ತಿರುವ ನೆರೆಹೊರೆಯವರ ಹಕ್ಕುಗಳು ಎಂಬ ರಾಷ್ಟ್ರವ್ಯಾಪಿ ಅಭಿಯಾನದ ಅಂಗವಾಗಿ ಮಡಿಕೇರಿಯ ಸಿ.ಪಿ.ಸಿ ಲೇಔಟ್ ನಲ್ಲಿರುವ ಕಾರುಣ್ಯ ಸದನದ ಸಭಾಂಗಣದಲ್ಲಿ ಸೌಹಾರ್ದ ಚಹಕೂಟ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ವಲಯ ಸ0ಚಾಲಕ ಯು.ಅಬ್ದುಲ್ ಸಲಾಮ್ , ಇಂದು ಕುಟುಂಬ ಸಂಭಂದಗಳು ಶಿಥಿಲಗೊಳ್ಳುತ್ತಿದೆ. ತಂದೆ ತಾಯಿಯಂದಿರನ್ನು ಕಡಗಣಿಸಲಾಗುತ್ತಿದೆ, ವೃದ್ಧಾಶ್ರಮಗಳು, ನಿರಾಶ್ರಿತ ಕೇಂದ್ರಗಳು ಅಲ್ಲಲ್ಲಿ ಅಣಬೆಗಳಂತೆ ತಲೆ ಎತ್ತುತ್ತಿದೆ. ಅನಾಥಾಶ್ರಮಗಳಲ್ಲಿ ಬರೀ ನಿರ್ಗತಿಕರು ಮಾತ್ರವಲ್ಲ , ಸ್ವಂತ ಕುಟುಂಬ, ಮಕ್ಕಳು ಇರುವ ಮನೆಗಳಿಂದ ಹೊರಹಾಕಲ್ಪಟ್ಟ ತಂದೆ-ತಾಯಿ, ತಾತ-ಅಜ್ಜಿಯಂದಿರು ತಮ್ಮ ಕೊನೆಯಗಳಿಗೆಯನ್ನು ಆಶ್ರಮಗಳಲ್ಲಿ ಕಳೆಯುತ್ತಿರವುದು ಸಮಾಜದ ಬಹು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು. ಯಾರು ನೆರೆಹೊರೆಯವರು ತನ್ನ ಉಪಟಳದಿಂದ ಸುರಕ್ಷಿತರಲ್ಲವೋ ಆತ ಎಂದಿಗೂ ಓರ್ವ ನೈಜ ವಿಶ್ವಾಸಿಯಾಗಲು ಖಂಡಿತಾ ಸಾಧ್ಯವಿಲ್ಲ ಎಂದು ಪ್ರವಾದಿ ಮೊಹಮ್ಮದ್ ಸ ಅವರ ವಚನವೊಂದನ್ನು ಉಚ್ಚರಿಸಿದ ಅವರು, ಪ್ರತಿಯೊಬ್ಬರು ತನ್ನ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಬೇಕು.ಅದೇ ರೀತಿ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು. ಅವರ ಒಳಿತಿಗಾಗಿ ಪ್ರಾರ್ಥಿಸಬೇಕು ಎಂದು ಹೇಳಿದರು. ಮನುಷ್ಯರೆಲ್ಲರೂ ಒಂದೇ ದೇವನ ದಾಸರು , ನಿಮ್ಮಲ್ಲಿ ವಿವಿಧ ಬಾಷೆ ,ಪಂಗಡ ಜಾತಿ,ಧರ್ಮ ಗೋತ್ರಗಳಾಗಿ ವಿಂಗಡಿಸಿದ್ದು ಪರಸ್ಪರ ಪರಿಚಯಿಸಲಾಗಿದೆ ಎಂದು ಪವಿತ್ರ ಕುರ್ ಆನ್ ಪ್ರತಿಪಾದಿಸಿದೆ ಎಂದರು. ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಮೊಹಮ್ಮದ್ ಹನೀಪ್ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಮಸ್ಜಿದುರಹ್ಮಾ ಧರ್ಮಗುರುಗಳು ಉಮ್ಮರ್ ಮೌಲವಿ ಕುರ್ ಆನ್ ಪಠಿಸಿದರು. ಎಂ.ಅಬ್ದುಲ್ಲಾ ಕಾರ್ಯಕ್ರಮ ನಿರೂಪಿಸಿದರು. ಕೊಡಗು ಜಿಲ್ಲಾ ಸದಸ್ಯ ಮೊಹಮ್ಮದ್ ಮುಸ್ತಫ ವಂದಿಸಿದರು.












