
ಮಡಿಕೇರಿ NEWS DESK ಡಿ.7 : ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಅಮೂಲ್ಯ ರತ್ನವಾಗಿದ್ದು, ದೇಶಕ್ಕೆ ನೀಡಿದ ಅವರ ಕೊಡುಗೆ ಅಪಾರವಾಗಿದೆ. ಸಂವಿಧಾನದ ಮೂಲಕ ಎಲ್ಲಾ ವರ್ಗಕ್ಕೆ ನ್ಯಾಯವನ್ನು ನೀಡಿದ್ದು ಶೋಷೀತ ಸಮುದಾಯ ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರುವಂತಾಗಲು ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ ಎಂದು ಬಿಜೆಪಿ ಎಸ್.ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಹೇಳಿದರು. ಮಡಿಕೇರಿಯ ಅಂಬೇಡ್ಕರ್ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಎಸ್.ಸಿ ಮೋರ್ಚಾದ ವತಿಯಿಂದ ನಡೆದ ಡಾ.ಅಂಬೇಡ್ಕರ್ ಅವರ 69 ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ಅವರ ಸಂವಿಧಾನ ಆಧುನಿಕ ಭಾರತಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದೆ. ನ್ಯಾಯವಾದಿ ಅರ್ಥಶಾಸ್ತ್ರಜ್ಞ, ತತ್ವಜ್ಞಾನಿ ಸಮಾಜ ಸುಧಾರಕ ಮಾತ್ರವಲ್ಲದೆ ರಾಷ್ಟ್ರ ನಿರ್ಮಾಣಕಾರರಾಗಿ ಅವರ ನಿರಂತರ ಪ್ರಯತ್ನಗಳು ಇಂದು ರಾಷ್ಟ್ರ ಎಲ್ಲಾ ರೀತಿಯಲ್ಲಿ ಮುಂದೆ ಬರಲು ಕಾರಣವಾಗಿದೆ. ಅಂಬೇಡ್ಕರ್ ಅವರು ವಿದ್ಯಾಭ್ಯಾಸಕ್ಕಾಗಿ ಪಟ್ಟಂತಹ ಆ ಕಷ್ಟದ ದಿನಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರು ಮನೆ ಮನದಲ್ಲೂ ನೆನೆಸಿಕೊಳ್ಳುವಂತಾಗಬೇಕೆಂದರು. ಈ ಸಂದರ್ಭ ಅಂಬೇಡ್ಕರ್ ಭಾವಚಿತ್ರಕ್ಕೆ ಎಸ್ಸಿ ಮೋರ್ಚಾದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಗೌರವ ಸಲ್ಲಿಸಿದರು. ಎಸ್.ಸಿ ಮೋರ್ಚಾದ ಮಡಿಕೇರಿ ಗ್ರಾಮಂತರ ಮಂಡಲ ಪ್ರಧಾನ ಕಾರ್ಯದರ್ಶಿ ಹೀರಾ ಸುಬ್ಬಯ್ಯ, ಮಡಿಕೇರಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಮಹೇಶ್, ನಗರ ಮಂಡಲ ಸದಸ್ಯ ಸಂದೀಪ್, ಅರುಣ್ ಕುಮಾರ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಮಂಜುನಾಥ್ ಸೇರಿದಂತೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.








