ಮಡಿಕೇರಿ ಡಿ.9 NEWS DESK : ಆಧುನೀಕತೆಯ ಸ್ಪರ್ಶವಿಲ್ಲದೆ, ಬದುಕಿನ ಅನುಭವಗಳನ್ನು ಯಾವುದೇ ಅಡೆ ತಡೆಗಳಿಲ್ಲದೆ ಸಾಹಿತ್ಯದ ಮೂಲಕ ಹೊರಹೊಮ್ಮಿಸುತ್ತಿದ್ದ ಹಿರಿಯ ಸಾಹಿತಿಗಳು ಇಂದಿನ ಯುವ ಪೀಳಿಗೆಗೆ ಸಾಹಿತ್ಯ ರಚನೆಯ ಕುರಿತು ಪ್ರೇರಣೆಯನ್ನು ನೀಡಬೇಕು ಎಂದು ಕವಿ ಕಾಜೂರು ಸತೀಶ್ ತಿಳಿಸಿದ್ದಾರೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ನಡೆದ ‘ಹಿರಿಯರ ಕವಿಗೋಷ್ಠಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಕಲ್ಪನೆಯೇ ಇಲ್ಲದ ದಿನಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಬೆರೆತು, ತಮ್ಮ ಅನುಭವಗಳನನ್ನು ಹಿರಿಯರು ಬರಹಕ್ಕಿಳಿಸುತ್ತಿದ್ದರು. ಅಂತಹ ಪರಿಸ್ಥಿತಿಗಳಿಗೆ ತದ್ವಿರುದ್ಧವಾಗಿರುವ ಸ್ಥಿತಿಯನ್ನು ನಾವಿಂದು ಕಾಣುತ್ತಿದ್ದೇವೆ, ಮೊಬೈಲ್, ಸಾಮಾಜಿಕ ಜಾಲತಾಣಗಳ ಹಾವಳಿ ಮೆದುಳನ್ನು ಕಿತ್ತು ಬಗೆದು ತಿನ್ನುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಶಾಂತವಾದ ಅಂದಿನ ದಿನಮಾನಗಳ ಪರಿಸ್ಥಿತಿ ಇಂದು ಬದಲಾಗಿದೆ. ಇಂತಹ ಕಾಲ ಘಟ್ಟದಲ್ಲಿ ಹಿಂದಿನ ಮತ್ತು ಇಂದಿನ ಪರಿಸ್ಥಿತಿಗಳನ್ನು ಮಿಳಿತಗೊಳಿಸಿ ಸೃಜನಾತ್ಮಕವಾದ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದೇ ಒಂದು ದೊಡ್ಡ ಸವಾಲೆಂದು ಅಭಿಪ್ರಾಯಿಸಿದ ಕಾಜೂರು ಸತೀಶ್, ಹಿರಿಯ ಸಾಹಿತಿಗಳು ತಮ್ಮ ಅನುಭವಗಳನ್ನು ಹೊಸ ತಲೆಮಾರಿಗೆ ಹಸ್ತಾಂತರಿಸಬೇಕೆಂದು ನುಡಿದರು. *ಸೃಜನಶೀಲತೆಯ ಕಾರ್ಯ* ಕಾವ್ಯವೆನ್ನುವುದು ಸಂವೇದನೆ ಮತ್ತು ಸೃಜನಶೀಲತೆಯ ಕಾರ್ಯವೇ ಆಗಿದೆಯೆಂದು ಅಭಿಪ್ರಾಯಿಸಿದ ಕಾಜೂರು ಸತೀಶ್, ಹುಲಿ ಬೇಟೆಗಾಗಿ ಚಿರತೆಯನ್ನು ಬೆನ್ನಟ್ಟುವುದನ್ನು ಕಾಣುವ ಸಂದರ್ಭ ಜಿಂಕೆಯ ಪ್ರಾಣ ಭಯದೊಂದಿಗೆ ಹುಲಿಯ ಹಸಿವನ್ನು ಕಾಣುವ ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿರುವಾತ ‘ಕವಿ’ ಎನಿಸಿಕೊಳ್ಳುತ್ತಾನೆ. ತಾವು ಬರೆಯುವ ಯಾವುದೇ ವಿಷಯಗಳಲ್ಲಿ ತಾದಾತ್ಮ್ಯತೆಯನ್ನು ಹೊಂದುವ ಹಾಗೂ ತಾವೇ ಆ ವಿಷಯವಾಗಿ ಹೋಗುವ ಮನಸ್ಥಿತಿ ಅತ್ಯವಶ್ಯ. ಕುವೆಂಪು ಅವರು ಹೇಳಿದಂತೆ ನೀಲ ಆಗಸದ ಕುರಿತು ಬರೆಯುವಾತ ಆಗಸದ ನೀಲಿಯೇ ಆಗಿಬಿಡಬೇಕೆನ್ನುವ ಮಾತನ್ನು ಅವರು ಉಲ್ಲೇಖಿಸಿದರು. *ಯುವ ಸಮೂಹದ ಸಂಕಷ* ಆಧುನಿಕ ಜಗತ್ತಿನ ಮೊಬೈಲ್‍ಗಳು, ಸ್ಮಾರ್ಟ್ ಫೋನ್‍ಗಳು ಗಂಭೀರ ಬರವಣಿಗೆಯ ಪ್ರಯತ್ನಗಳಿಗೆ ದೊಡ್ಡ ಅಡ್ಡಿಯೇ ಆಗಿ ಹೋಗುತ್ತಿವೆ. ಒಂದೊಳ್ಳೆಯ ಕೃತಿಯ ಓದಿನ ನಡುವೆ ಮೊಳಗಿ ಬಿಡುವ ಮೊಬೈಲ್ ರಿಂಗ್, ಓದಿನ ರಸಭಂಗವನ್ನು ಉಂಟುಮಾಡುತ್ತದೆಯೆಂದು ಅಭಿಪ್ರಾಯಿಸಿದ ಅವರು, ಇದು ಬರವಣಿಗೆಯ ಹಂತಗಳಲ್ಲು ಸಾಕಷ್ಟು ತೊಡಕುಗಳನ್ನು ಸೃಷ್ಟಿಸುತ್ತಿವೆ. ಇವುಗಳನ್ನು ಮೀರಿ ಯುವ ಸಮೂಹ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಹಿರಿಯರು ತಮ್ಮ ಅನುಭವಗಳಿಂದ ಮಾರ್ಗದರ್ಶನ ಮಾಡುವ ಅಗತ್ಯತೆ ಇರುವುದಾಗಿ ತಿಳಿಸಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿನ ಹಿರಿಯ ಕವಿಗಳನ್ನು ಒಗ್ಗೂಡಿಸುವ ಪ್ರಯತ್ನವಾಗಿ ಹಿರಿಯರ ಕವಿಗೋಷ್ಠಿಯನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ ಐವತ್ತಕ್ಕೂ ಹೆಚ್ಚಿನ ಹಿರಿಯ ಕವಿಗಳಿದ್ದು, ಮುಂಬರುವ ದಿನಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇವರೆಲ್ಲರನ್ನೂ ಸೇರಿಸುವ ಪ್ರಯತ್ನಗಳು ನಡೆಯಲಿದೆಯೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಸಾಹಿತಿ ಬಿ.ಎ.ಷಂಶುದ್ದೀನ್, ಸಾಹಿತಿ ಕೃಪಾದೇವರಾಜ್ ಉಪಸ್ಥಿತರಿದ್ದರು. *ಕವನ ವಾಚನ* ಇದೇ ಸಂದರ್ಭ ಜಿಲ್ಲೆಯ ವಿವಿಧೆಡೆಗ¼ ಹಿರಿಯ ಸಾಹಿತಿಗಳು ಕವನಗಳನ್ನು ವಾಚಿಸಿ ಗಮನ ಸೆಳೆದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಸರ್ವರನ್ನೂ ಸ್ವಾಗತಿಸಿದರು. ಉಪನ್ಯಾಸಕಿ ಪ್ರತಿಮಾ ರೈ ಕಾರ್ಯಕ್ರಮ ನಿರೂಪಿಸಿದರು.













