ಮಡಿಕೇರಿ ಡಿ.11 NEWS DESK : ಮಾನವ ದೇಹಕ್ಕೆ ಅತ್ಯಂತ ಮುಖ್ಯವಾದ ಪೋಷಕಾಂಶಗಳಲ್ಲಿ ಒಂದಾದ ವಿಟಮಿನ್ ಡಿ3 ಯನ್ನು ಕೋಲೆಕ್ಯಾಲ್ಸಿಫೆರಾಲ್ ಎಂದೂ ಕರೆಯುತ್ತಾರೆ. ಇದು ದೇಹದಲ್ಲಿ ಹಾರ್ಮೋನ್‌ನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಮೂಳೆ ಆರೋಗ್ಯ, ರೋಗನಿರೋಧಕ ಶಕ್ತಿ, ಹೃದಯ ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆಧುನಿಕ ಜೀವನದಲ್ಲಿ ಅದರ ಕೊರತೆಯು ಸಾಮಾನ್ಯವಾಗಿದ್ದರೂ, ಸರಳ ಕ್ರಮಗಳ ಮೂಲಕ ಅದನ್ನು ನಿಯಂತ್ರಿಸಬಹುದು. :: ವಿಟಮಿನ್ ಡಿ3ಯ ಮಹತ್ವ :: ಇದು ಮೂಳೆಗಳ ಬೆಳವಣಿಗೆ ಮತ್ತು ಬಲಕ್ಕೆ ಅತ್ಯಗತ್ಯ. ಇದು ನಮ್ಮ ಆಹಾರದಿಂದ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಇದರಿಂದಾಗಿ ಆಸ್ಟಿಯೋಪೋರೋಸಿಸ್ ಮತ್ತು ರಿಕೆಟ್ಸ್ ನಂತಹ ಕಾಯಿಲೆಗಳನ್ನು ತಡೆಯುತ್ತದೆ. ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಸಂಶೋಧನೆಗಳ ಪ್ರಕಾರ, ವಿಟಮಿನ್ ಡಿ3 ಕ್ಯಾನ್ಸರ್, ಮಧುಮೇಹ, ಹೃದಯರೋಗಗಳು ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಎಲ್ಲರೂ ಮನೆಯ ಒಳಗಡೆ ಇದ್ದುದರಿಂದ ಬಿಸಿಲಿಗೆ ಮೈಯನ್ನು ಒಡ್ಡಿ ಕೊಳ್ಳುವುದು ಕಡಿಮೆಯಾಗಿ, ವಿಟಮಿನ್ ಡಿ3ಯ ಕೊರತೆಯಿಂದ ರೋಗದ ತೀವ್ರತೆಯನ್ನು ಹೆಚ್ಚಿಸಿದೆ ಎಂದು ಅಧ್ಯಯನಗಳು ತೋರಿಸಿವೆ. :: ಮೂಲಗಳು ::
ವಿಟಮಿನ್ ಡಿ3ಯ ಮುಖ್ಯ ಮೂಲ ಸೂರ್ಯನ ಬೆಳಕು. ಚರ್ಮದ ಮೇಲೆ ಸೂರ್ಯನ ಅಲ್ಟ್ರಾವೈಯಲೆಟ್ ಬಿ (ಯುವಿಬಿ) ಕಿರಣಗಳು ಬೀಳುವಾಗ ದೇಹವೇ ವಿಟಮಿನ್ ಡಿ3ಯನ್ನು ಉತ್ಪಾದಿಸುತ್ತದೆ. ಪ್ರತಿದಿನ 15-20 ನಿಮಿಷಗಳ ಸೂರ್ಯನ ಬೆಳಕು ಸಾಕು. ಆದರೆ, ಆಧುನಿಕ ಜೀವನ ಶೈಲಿಯಿಂದಾಗಿ, ಏಸಿ ಕೋಣೆಯಲ್ಲಿ ಕೆಲಸ ಮಾಡುವುದರಿಂದ ಅನೇಕರು ಇದನ್ನು ಪಡೆಯುವುದಿಲ್ಲ. ಆಹಾರ ಮೂಲಗಳಲ್ಲಿ ಮತ್ತಿ/ಭೂತಾಯಿ (ಸಾಲ್ಮನ್), ಬಂಗುಡೆ (ಮ್ಯಾಕರೆಲ್) ಮೀನುಗಳು, ಮೊಟ್ಟೆಯ ಹಳದಿ ಭಾಗ, ಕಾಡ್ ಲಿವರ್ ಆಯಿಲ್ ಮತ್ತು ಸುಧಾರಿತ (ಫೋರ್ಟಿಫೈಡ್ ) ಹಾಲು, ಕೆಲವು ಧಾನ್ಯಗಳು ಸೇರಿವೆ. ಸಸ್ಯಾಹಾರಿಗಳಿಗೆ ಯುವಿಬಿ ಬೆಳಕಿಗೆ ಒಡ್ಡಿಕೊಂಡ ಅಣಬೆ ಉತ್ತಮ ಮೂಲ. :: ಕೊರತೆಯ ಲಕ್ಷಣಗಳು : : ಬೇಗನೇ ದಣಿವು, ನಿರಂತರ ಆಯಾಸ, ಮೂಳೆ ನೋವು, ಬೆನ್ನು ನೋವು, ಸ್ನಾಯು ದೌರ್ಬಲ್ಯ, ಕೂದಲು ಉದುರುವಿಕೆ, ಖಿನ್ನತೆ ಮತ್ತು ಆಗಾಗ್ಗೆ ಸೋಂಕುಗಳು. ಮಕ್ಕಳಲ್ಲಿ ರಿಕೆಟ್ಸ್ (ಮೂಳೆಗಳ ವಕ್ರತೆ), ವಯಸ್ಕರಲ್ಲಿ ಆಸ್ಟಿಯೋಮಲೇಷಿಯಾ (ಮೂಳೆಗಳ ಮೃದುತ್ವ) ದಿಂದ ಬಿದ್ದು ಎಲುಬು ಮುರಿಯುವ ಅಪಾಯ ಕಾಣಿಸಬಹುದು. ರಕ್ತ ಪರೀಕ್ಷೆಯ ಮೂಲಕ ಕೊರತೆಯನ್ನು ಗುರುತಿಸಬಹುದು. :: ಪರಿಹಾರಗಳು : : ಕೊರತೆಯನ್ನು ತಡೆಯಲು ಪ್ರತಿದಿನ ಸೂರ್ಯನ ಬೆಳಕನ್ನು ಪಡೆಯಿರಿ. ಸೂರ್ಯರಕ್ಷಣಾ ಕ್ರೀಮ್ ಬಳಸದೆ ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ನಡೆಯಿರಿ. ಆಹಾರದಲ್ಲಿ ವಿಟಮಿನ್ ಡಿ ಸಮೃದ್ಧ ಆಹಾರಗಳನ್ನು ಸೇರಿಸಿ. 600 ರಿಂದ 1000 ಮೈಕ್ರೋ ಗ್ರಾಂ ಪೂರಕ (ಸಪ್ಲಿಮೆಂಟ್) ಗಳನ್ನು ತೆಗೆದುಕೊಳ್ಳಿ. ಆದರೆ ಅತಿ ಪ್ರಮಾಣದಲ್ಲಿ ತೆಗೆದು ಕೊಳ್ಳುವುದರಿಂದ ರಕ್ತದಲ್ಲಿ ಕ್ಯಾಲ್ಸಿಯಂ ಹೆಚ್ಚು (ಹೈಪರ್ಸ್‌ಕಾಲ್ಸಿಮಿಯಾ) ಆಗಿ ವಾಂತಿ, ಮಲಬದ್ಧತೆ, ಕಿಡ್ನಿ ಕಲ್ಲುಗಳ ಅಪಾಯ ಉಂಟಾಗಬಹುದು. ಹೀಗಾಗಿ ಎಚ್ಚರಿಕೆ ಅಗತ್ಯ, ವೈದ್ಯರ ಮೇಲ್ವಿಚಾರಣೆಯಿಲ್ಲದೆ ಇದನ್ನು ತೆಗೆದು ಕೊಳ್ಳುವುದು ತಪ್ಪು. ನಿಯಮಿತ ಬಿಸಿಲಿಗೆ ಮೈಯನ್ನು ಒಡ್ಡಿ ಕೊಳ್ಳುವಿಕೆ ಮತ್ತು ಸಮತೋಲಿತ ಜೀವನಶೈಲಿಯ ಮೂಲಕ ವಿಟಮಿನ್ ಡಿ3ಯ ಮಟ್ಟವನ್ನು ಸರಿಯಾಗಿರಿಸಿ. ಇದು ನಿಮ್ಮ ದೇಹವನ್ನು ಬಲಿಷ್ಠಗೊಳಿಸಿ, ರೋಗಗಳಿಂದ ರಕ್ಷಿಸುತ್ತದೆ.
ವರದಿ : ಡಾ. ಕೆ.ಬಿ.ಸೂರ್ಯ ಕುಮಾರ್











